ಬೆಂಗಳೂರು:ಯುವ ಸಮೂಹಕ್ಕೆ ಕೌಶಲ್ಯ ತರಬೇತಿ ನೀಡಿ, ಸಬಲೀಕರಣಗೊಳಿಸಲು ಸರ್ಕಾರ ಹಲವು ಯೋಜನೆ ಕೈಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ತರಬೇತಿ ಹಾಗೂ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳ ಜೊತೆಗಿನ ಒಪ್ಪಂದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಪೊರೇಟ್ ಸಂಸ್ಥೆಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು ಮತ್ತು ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಕೊಡಿಸಲು ಮುಂದಾಗಬೇಕು ಎಂದರು.
ಕೈಗಾರಿಕಾ ಆಧುನೀಕರಣ
ರಾಜ್ಯದ ಹತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಆಧುನೀಕರಣಕ್ಕೆ ಸರ್ಕಾರ ಮುಂದಾಗಿದೆ, ಕೆಲವು ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ, ಐಟಿಐ ಸಂಸ್ಥೆಗಳ ಉನ್ನತೀಕರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.
ಐಟಿಐಗಳಲ್ಲಿನ ಹಳೆ ಉಪಕರಣಗಳ ಬದಲಾವಣೆ ಮಾಡಿ ಹೊಸ ಉಪಕರಣಗಳನ್ನು ಅಳವಡಿಸಲು ಮುಂದಾಗಿದ್ದೇವೆ, ಇದರಿಂದ ಐಟಿಐ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ, ಬೆಂಗಳೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸೌರಚಾವಣಿ ತರಬೇತಿ
ಪ್ರಧಾನಮಂತ್ರಿ ಸೂರ್ಯ ಘರ್ – ಮುಫ್ತ್ ಬಿಜ್ಲಿ ಯೋಜನೆಯಡಿ ರಾಜ್ಯದ 252 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಐದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಸೌರಚಾವಣಿ ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಒಂದು ವಾರದ ಅಲ್ಪಾವಧಿ ತರಬೇತಿ ಪಡೆದಿದ್ದಾರೆ, ಇವರಿಗೆ ಉದ್ಯೋಗ ಅವಕಾಶ ದೊರೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ 10 ತರಬೇತಿದಾರರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು, ಐಟಿಐಗಳ ಪ್ರಾಂಶುಪಾಲರಿಗೆ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿತ್ತು, ಐಟಿಐಗಳಲ್ಲಿ ಕುಂದುಕೊರತೆ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡು, ಕೂಡಲೇ ನಿವಾರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.