ಕಲಬುರಗಿ:ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಜಿದ್ದಾಜಿದ್ದಿ ಶುರುವಾಗಿದೆ, 4 ಗೋಡೆ ಮಧ್ಯೆ ಇದ್ದ ರಹಸ್ಯ ಬಹಿರಂಗವಾಗಿದೆ, ಆ ಪಕ್ಷದಲ್ಲಿ ಅಧಿಕಾರಕ್ಕಾಗಿ ಹೊಡೆದಾಟವೂ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಉಪಚುನಾವಣೆ ಗೆದ್ದಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಡುವುದಿಲ್ಲ ಎಂಬ ಧಮ್ಕಿಯನ್ನು ಜನಕಲ್ಯಾಣ ಸಮಾವೇಶದ ಹೆಸರಿನಲ್ಲಿ ಹಾಕಲು ಹೊರಟಿದ್ದರು, ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಮ್ಮದೂ ಶೇ.50 ಪಾತ್ರ ಇದೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದು, ಮುಖ್ಯಮಂತ್ರಿ ಗಾದಿಗೇರಲು ಕಾಯುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ನಡೆದಿದೆ, ಒಳಒಪ್ಪಂದ ಕುರಿತು ಸಿದ್ದರಾಮಯ್ಯನವರೇ ತಿಳಿಸಬೇಕು.
ಜನಕಲ್ಯಾಣ ಎಂದರೇನು
ಜನಕಲ್ಯಾಣ ಎಂದರೇನು, ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ 3 ದಿನ ಮುಂಚಿತವಾಗಿ ಗ್ಯಾರಂಟಿ ಹಣ ಬಿಡುಗಡೆ ಮಾಡುವುದು, ಆಮೇಲೆ ಮರೆತು ವಿಧಾನಸಭಾ ಉಪಚುನಾವಣೆ ಬಂದಾಗ ಮತ್ತೆ ಗ್ಯಾರಂಟಿ ಹಣ ಹಾಕುವುದೇ ಎಂದು ಪ್ರಶ್ನಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ಸುಗಳೇ ಇಲ್ಲದಂತಾಗಿದೆ, ರಾಜ್ಯದ ಅಭಿವೃದ್ಧಿಗಾಗಿ ಯಾವ ಹೊಸ ಯೋಜನೆ ನೀಡಿದ್ದಾರೆ, ಅನುದಾನ ಇಲ್ಲದೆ, ಕ್ಷೇತ್ರ ಅಭಿವೃದ್ಧಿ ಮಾಡಲಾಗದೆ ಶಾಸಕರು ತೊಂದರೆಗೆ ಸಿಲುಕಿದ್ದಾರೆ, ಹಾಸನದಲ್ಲಿ ನಡೆಯುವ ಜನಕಲ್ಯಾಣ ಕಾರ್ಯಕ್ರಮ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ.
ಮುಡಾ ನಿವೇಶನ ಹಿಂತಿರುಗಿಸಿದ್ದಾರೆ
ಮುಡಾ ಅಕ್ರಮವನ್ನು ಬಿಜೆಪಿ-ಜೆಡಿಎಸ್ ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡಿದೆವು, ತಾವು ತಪ್ಪು ಮಾಡಿಲ್ಲ ಎಂದಿದ್ದ ಮುಖ್ಯಮಂತ್ರಿಗಳು, 62 ಕೋಟಿ ರೂ. ಪರಿಹಾರ ಕೇಳಿದ್ದರು, ಬಳಿಕ ಪರಿಹಾರ ಇಲ್ಲದೇ ನಿವೇಶನ ಹಿಂತಿರುಗಿಸಿದ್ದಾರೆ, ನಕಲಿ ಸಹಿ ಮಾಡಿದ್ದು, ದಾಖಲೆಗಳನ್ನು ತಿದ್ದಿರುವುದು ಇ.ಡಿ. ತನಿಖೆಯಿಂದ ಬೆಳಕಿಗೆ ಬರುತ್ತಿದೆ.
ಮುಡಾ ವಿಷಯದಲ್ಲಿ ಇ.ಡಿ.ಗೆ ತನಿಖೆ ಮಾಡುವ ಅಧಿಕಾರವೇ ಇಲ್ಲ ಎಂಬ ಮುಖ್ಯಮಂತ್ರಿಗಳ ಆಕ್ಷೇಪದ ಹಿಂದೆ ತಮಗೆ ಬೇಕಾದ ಅಧಿಕಾರಿಗಳನ್ನು ತನಿಖಾ ಸಂಸ್ಥೆಯಲ್ಲಿ ಇಟ್ಟುಕೊಂಡು, ಅಕ್ರಮ ನಡೆದೇ ಇಲ್ಲ, ನಾನು ಪ್ರಾಮಾಣಿಕ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದೀರಿ, ಅಕ್ರಮ ಬಹಿರಂಗವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರಿಗೆ ಇ.ಡಿ. ಮೇಲೆ ಕೋಪ ಶುರುವಾಗಿದೆ ಎಂದರು.
ವಕ್ಫ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ, ಚಟ್ನಳ್ಳಿ ಎಂಬ ಗ್ರಾಮದಲ್ಲಿ ಇಡೀ ಊರಿಗೇ ನೋಟಿಸ್ ಕೊಟ್ಟಿದ್ದು, ಇದು ಆತಂಕಕ್ಕೆ ಕಾರಣವಾಗಿದೆ, ಅದಕ್ಕಾಗಿ ಬಿಜೆಪಿ ರೈತರ ಪರ ಹೋರಾಟ ಶುರು ಮಾಡಿದೆ ಎಂದರು.