ಬೆಂಗಳೂರು:ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಏನು ಮಾತನಾಡಿಕೊಂಡಿದ್ದೇವೆ ಎಂಬುದನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಾನು ವಾಹಿನಿಯೊಂದರ ಜೊತೆ ನನ್ನದೇ ಆದ ವಿಚಾರ ಪ್ರಸ್ತಾಪ ಮಾಡಿದ್ದೆ, ಈ ವಿಚಾರವಾಗಿ ಮುಖ್ಯಮಂತ್ರಿಗಳು ನಿನ್ನೆ ಯಾವುದೇ ಚರ್ಚೆ ಇಲ್ಲ ಎಂದಿದ್ದು, ಈ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದೇನೆ.
ಮುಖ್ಯಮಂತ್ರಿ ಮಾತು ಒಪ್ಪುತ್ತೇನೆ
ಮುಖ್ಯಮಂತ್ರಿಗಳ ಮಾತನ್ನು ನಾನು ಒಪ್ಪುತ್ತೇನೆ, ಸದ್ಯಕ್ಕೆ ಅಧಿಕಾರ ಹಸ್ತಾಂತರದ ಪ್ರಸ್ತಾಪವಿಲ್ಲ, ಯಾವುದೇ ಸಮಸ್ಯೆ ಇಲ್ಲದೆ ನಮ್ಮ ಸರ್ಕಾರ ಅಧಿಕಾರಾವಧಿ ಪೂರ್ಣಗೊಳಿಸುತ್ತದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ಕುರಿತು ಸಚಿವ ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿರುವ ಅಸಮಾಧಾನದ ಬಗ್ಗೆ ನಾನು ಮಾಧ್ಯಮದ ಮುಂದೆ ಏನೂ ಮಾತನಾಡಿಲ್ಲ, ಇತರರ ಜತೆಯೂ ಮಾತನಾಡಿಲ್ಲ.
ಪರಮೇಶ್ವರ್ ಸೇರಿದಂತೆ ಯಾರ ಜತೆಯೂ ನನಗೆ ಭಿನ್ನಾಭಿಪ್ರಾಯವಿಲ್ಲ, ರಾಜಕೀಯದಲ್ಲಿ ನನಗೆ ಯಾರೂ ವೈರಿಗಳಲ್ಲ, ಎಲ್ಲರೂ ನನ್ನ ಸ್ನೇಹಿತರೇ, ಪಕ್ಷದಲ್ಲಿ ನಾವು ಜತೆಗೂಡಿ ಕೆಲಸ ಮಾಡಿದ್ದು, ಮುಂದೆಯೂ ಜತೆಯಲ್ಲೇ ಸಾಗುತ್ತೇವೆ, ಜತೆಗೂಡಿ ಯಶಸ್ಸು ಕಾಣುತ್ತೇವೆ ಎಂದರು.
ಬಲಪ್ರದರ್ಶನದ ಅಗತ್ಯವಿಲ್ಲ
ಕಾಂಗ್ರೆಸ್‌ಗೆ ಬಲಪ್ರದರ್ಶನದ ಅಗತ್ಯವಿಲ್ಲ, ಪಕ್ಷದ ಆಚಾರ, ವಿಚಾರವನ್ನು ಜನರಿಗೆ ತಿಳಿಸಲು ಕಾರ್ಯಕ್ರಮ ಮಾಡಿದರೆ ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಹೊಟ್ಟೆಯುರಿ ಏಕೆ.
ಹಾಸನದಲ್ಲಿ ನಮ್ಮ ತಾಯಂದಿರು ಕಣ್ಣೀರು ಹಾಕಿದಾಗ ಕಣ್ಣೀರನ್ನು ಒರೆಸುವ ಪ್ರಯತ್ನ ಯಾರೂ ಮಾಡಲಿಲ್ಲ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಂದು ಕಣ್ಣೀರು ಹಾಕಿದರು, ಬಿಜೆಪಿ ಹಾಗೂ ಜೆಡಿಎಸ್ ನೆಲೆ ಕಳೆದುಕೊಳ್ಳುತ್ತಿರುವ ಸಂಕಟದಿಂದ ಕಾಂಗ್ರೆಸ್ ಕಾರ್ಯಕ್ರಮ ಟೀಕಿಸುತ್ತಿವೆ ಎಂದರು.