ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎನ್ನುವುದಾದರೆ, ನಾವೆಲ್ಲಾ ಏಕಿರಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದ ಆಗಿರುವ ವಿಚಾರ ನನಗೆ ಗೊತ್ತಿಲ್ಲ, ವರಿಷ್ಠರು ನಮಗ್ಯಾರಿಗೂ ಏನೂ ಹೇಳಿಲ್ಲ, ಆವರವರೇ ಒಪ್ಪಂದ ಮಾಡಿಕೊಂಡರೆ ಉಳಿದವರಿಗೇನು ಕೆಲಸ ಎಂದಿದ್ದಾರೆ.
ಸಿದ್ದರಾಮಯ್ಯ ಸೂತ್ರ ತಳ್ಳಿಹಾಕಿದ್ದರು
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್, ಪಕ್ಷದ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹಂಚಿಕೆ ಸೂತ್ರ ಆಗಿರುವುದನ್ನು ಬಹಿರಂಗಪಡಿಸಿದ್ದರು, ಅದರ ಬೆನ್ನಲ್ಲೇ ಸಿದ್ದರಾಮಯ್ಯ ತಳ್ಳಿಹಾಕಿದ್ದರು.
ಈ ಬೆಳವಣಿಗೆ ಸಂಪುಟದ ಹಿರಿಯ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
9 ಮಂದಿ ಸಿಎಂ ರೇಸ್‌ನಲ್ಲಿ
ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿಯಾಗಲು, ಪರಮೇಶ್ವರ್, ಸತೀಶ್ ಜಾರಕಿಹೊಳಿ, ಆರ್.ವಿ.ದೇಶಪಾಂಡೆ, ಜಯಚಂದ್ರ ಸೇರಿದಂತೆ ಒಂಭತ್ತಕ್ಕೂ ಹೆಚ್ಚು ಮಂದಿ ರೇಸ್‌ನಲ್ಲಿದ್ದಾರೆ.
ಶಿವಕುಮಾರ್ ಹೇಳಿಕೆ ಬೆನ್ನಲ್ಲೇ ಪರಮೇಶ್ವರ್ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ರೀತಿ ಒಪ್ಪಂದ ಆಗಲು ಕಾಂಗ್ರೆಸ್‌ನಲ್ಲಿ ಸಾಧ್ಯವಿಲ್ಲ.
ಒಂದು ವೇಳೆ ಆ ರೀತಿ ಆಗಿದ್ದರೆ, ಅವರಿಬ್ಬರೇ ರಾಜಕಾರಣ ಮಾಡಲಿ, ಅಧಿಕಾರವನ್ನೂ ನಡೆಸಲಿ ಬಿಡಿ, ಬೇರೆಯವರು ಇರೋದು ಬೇಡವೇ ಎಂದು ಪ್ರಶ್ನಿಸಿದರು.
ನಾವುಗಳಂತೂ ಪಕ್ಷಕ್ಕೆ ನಿಷ್ಠ
ಪಕ್ಷದ ಹೈಕಮಾಂಡ್ ಇಂತಹ ಸೂತ್ರಗಳನ್ನು ಮಾಡುವುದಿಲ್ಲ, ನಾವುಗಳಂತೂ ಪಕ್ಷಕ್ಕೆ ನಿಷ್ಠರಾಗಿರುತ್ತೇವೆ.
ನನಗೆ ಇಂತಹ ಸುದ್ದಿ ಈ ಹಿಂದೆ ಕಿವಿಗೆ ಬಿದ್ದಾಗ, ನಮ್ಮ ಪಕ್ಷದ ವರಿಷ್ಠ ಮುಖಂಡರುಗಳನ್ನೇ ಕೇಳಿದ್ದೇನೆ, ಅವರ‍್ಯಾರೂ ಒಪ್ಪಂದ ಆಗಿದೆ ಎಂದು ಹೇಳಿಲ್ಲ.
ಶಿವಕುಮಾರ್ ಅವರು ಹಠಾತ್ತಾಗಿ ಇಂತಹ ಹೇಳಿಕೆಯನ್ನು ಏತಕ್ಕೆ ನೀಡಿದ್ದಾರೆ ಎಂಬುದು ನನಗಂತೂ ತಿಳಿಯುತ್ತಿಲ್ಲ, ಆದರೆ, ಮುಖ್ಯಮಂತ್ರಿ ಅವರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ ಎಂದರು.