ಬೆಂಗಳೂರು:ಹಾಸನದ ಜನಕಲ್ಯಾಣ ಸಮಾವೇಶಕ್ಕೆ ಪ್ರತಿಯಾಗಿ ಡಿಸೆಂಬರ್ 15ರಂದು ಮಂಡ್ಯದಲ್ಲಿ ಜೆಡಿಎಸ್ ಬೃಹತ್ ಸಮ್ಮೇಳನ ಆಯೋಜಿಸಿದೆ.
ಹಾಸನದ ಸಮಾವೇಶ ಮುಗಿಯುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ದೆಹಲಿ ನಿವಾಸಲ್ಲಿ ಅವರ ಸಮ್ಮುಖದಲ್ಲೇ ಈ ನಿರ್ಣಯ ಕೈಗೊಳ್ಳಲಾಗಿದೆ.
ದೇವೇಗೌಡರಲ್ಲದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಮಾಜಿ ಶಾಸಕರಾದ ಸಾ.ರಾ. ಮಹೇಶ್ ಹಾಗೂ ಸಿ.ಎಸ್ ಪುಟ್ಟರಾಜು ಉಪಸ್ಥಿತಿತರಿದ್ದರು.
ಅಭಿನಂದನಾ ಸಮಾವೇಶ
ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉತ್ತರ ನೀಡಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಮೈಸೂರು, ರಾಮನಗರ, ಹಾಸನ, ಚಾಮರಾಜನಗರ ಹಾಗೂ ಸ್ಥಳೀಯ ಮಂಡ್ಯದ ಒಂದು ಲಕ್ಷ ಕಾರ್ಯಕರ್ತರನ್ನು ಅಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೇರಿಸಿ, ಹಾಸನದಲ್ಲಿ ಸಿದ್ದರಾಮಯ್ಯ ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರಂತೆ.
ಡಿಸೆಂಬರ್ 16 ಕುಮಾರಸ್ವಾಮಿ ಅವರ ಜನ್ಮದಿನವಾಗಿದ್ದು ಅದರ ಹಿಂದಿನ ದಿನ, ಅವರು ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಈ ಸಮಾವೇಶ ನಡೆಯುತ್ತಿದೆ.
ಪುಟ್ಟರಾಜು, ಸಾ.ರಾ.ಮಹೇಶ್ ಹೊಣೆಗಾರಿಕೆ
ಸಿ.ಎಸ್.ಪುಟ್ಟರಾಜು ಹಾಗೂ ಸಾ.ರಾ.ಮಹೇಶ್ ಅಭಿನಂದನಾ ಸಮಾರಂಭದ ಪೂರ್ಣ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ.
ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ಗಡಿ ಜಿಲ್ಲೆಯಲ್ಲೇ ದೊಡ್ಡ ಪ್ರಮಾಣದಲ್ಲಿ ಕಾರ್ಯಕರ್ತರನ್ನು ಸೇರಿಸಿ ಅವರಿಗೆ ಟಾಂಗ್ ಕೊಡುವುದು ಹಾಗೂ ಅವರ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ಜನರ ಮುಂದಿಡಲು ಕುಮಾರಸ್ವಾಮಿ ವೇದಿಕೆ ಬಳಸಿಕೊಳ್ಳಲಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮುಂದಾಳತ್ವದಲ್ಲಿ ಸಮಾವೇಶ ನಡೆಯಲಿದ್ದು, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ಪಕ್ಷದಲ್ಲಿ ದೊಡ್ಡ ಹುದ್ದೆಯನ್ನು ಕುಮಾರಸ್ವಾಮಿ ವೇದಿಕೆಯಲ್ಲೇ ಘೋಷಣೆ ಮಾಡಲಿದ್ದಾರಂತೆ.
ಜಿ.ಟಿ.ಡಿ. ಮನವೊಲಿಕೆ
ಪಕ್ಷದಲ್ಲಿದ್ದುಕೊಂಡೇ ನಾಯಕರ ಮೇಲೆ ಮುನಿಸಿಕೊಂಡಿರುವ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಕೆಲವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವ ಕಾರ್ಯವೂ ಸಮಾವೇಶಕ್ಕೂ ಮುನ್ನ ಕಾರ್ಯಕ್ರಮದ ಆಯೋಜಕರಿಂದ ನಡೆಯಲಿದೆ.
ಪುಟ್ಟರಾಜು ಹಾಗೂ ಮಹೇಶ್ ಅವರುಗಳು, ಜಿ.ಟಿ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ನಂತರ ದೇವೇಗೌಡರ ಬಳಿ ಕರೆತಂದು ಸಂಧಾನ ನಡೆಸಲು ಮುಂದಾಗಿದ್ದಾರೆ.
ಹಾಸನದ ಸಮಾವೇಶದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಬಗ್ಗೆ ಇಲ್ಲದ ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ ಅವರಿಗೆ ಸ್ವತಃ ದೇವೇಗೌಡರೇ ಅಂದಿನ ಸಭೆಯಲ್ಲಿ ಉತ್ತರ ನೀಡಲಿದ್ದಾರಂತೆ.
ಕುಟುಂಬ ವಿಷಯವಲ್ಲದೆ, ಜೆಡಿಎಸ್ ಪಕ್ಷದ ವಿರುದ್ಧವೂ ಮನಬಂದಂತೆ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದು, ಇವೆಲ್ಲಕ್ಕೂ ತಕ್ಷಣವೇ ಉತ್ತರ ನೀಡಲು ಮಂಡ್ಯದಲ್ಲೇ ಅಭಿನಂದನಾ ಸಮಾರಂಭ ನೆಪದಲ್ಲಿ ಸಮಾವೇಶ ನಡೆಯಲಿದೆ.