ಬೆಂಗಳೂರು:ಕ್ರಾಂತಿಕಾರಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಭಾರತಕ್ಕೆ ಜಗತ್ತಿನಲ್ಲಿಯೇ ಶ್ರೇಷ್ಠ ಲಿಖಿತ ಸಂವಿಧಾನ ನೀಡಿದ್ದಾರೆ, ತಮ್ಮ ಬದುಕನ್ನು ಸಾಮಾಜಿಕ ಹೋರಾಟ ಹಾಗೂ ಸಮಾಜ ಪರಿವರ್ತನೆಗೆ ತೊಡಗಿಸಿಕೊಂಡರು, ದೇಶ ಹಾಗೂ ಸಾಮಾಜಿಕ ಬದುಕಿಗೆ ಅಗತ್ಯವಾದ ಸಂವಿಧಾನ ಕೊಟ್ಟಿದ್ದಾರೆ ಎಂದರು.
ದೇಶದ ಜನರಿಗೆ ಎಚ್ಚರಿಕೆ
ಸಂವಿಧಾನದ ಶ್ರೇಷ್ಠತೆ ತಿಳಿಯಬೇಕಾದರೆ ಒಳ್ಳೆಯವರ ಕೈಯಲ್ಲಿ ಅನುಷ್ಟಾನವಾಗಬೇಕು, ಕೆಟ್ಟವರ ಕೈಗೆ ಹೋದರೆ ಕೆಟ್ಟದಾಗುತ್ತದೆ ಎಂಬುದಾಗಿ ಡಾ.ಅಂಬೇಡ್ಕರ್ ದೇಶದ ಜನರಿಗೆ ಎಚ್ಚರಿಕೆ ಕೊಟ್ಟಿದ್ದರು.
ದಲಿತರಿಗಲ್ಲದೆ, ಎಲ್ಲರಿಗೂ ಸಾಮಾಜಿಕ ಅವಕಾಶ ದೊರಕಿಸಲು ಶ್ರಮಿಸಿದರು, ಅವಕಾಶ ವಂಚಿತರು, ಶೋಷಣೆ, ಅನ್ಯಾಯ, ಅವಮಾನ, ದೌರ್ಜನ್ಯಕ್ಕೆ ಒಳಪಟ್ಟ ಎಲ್ಲ ಜನರ ಪರವಾಗಿ ಕೆಲಸ ಮಾಡಿದರು.
ಸಮಾಜದಲ್ಲಿ ಸಮಾನತೆ ನಿರ್ಮಾಣವಾಗಬೇಕು, ಸಂವಿಧಾನದ ಧ್ಯೇಯೋದ್ದೇಶಗಳೂ ಅದನ್ನೇ ಹೇಳುತ್ತವೆ, ಸಂವಿಧಾನದ ಅನುಕೂಲ ಪಡೆದವರು ಅವರ ಸೋದರ ಜನಾಂಗಗಳಿಗೆ ಸಹಾಯ ಮಾಡಬೇಕು, ಎಲ್ಲರೂ ಸಂವಿಧಾನ ಅರ್ಥ ಮಾಡಿಕೊಳ್ಳಬೇಕೆಂದು ಡಾ.ಅಂಬೇಡ್ಕರ್ ಬಯಸಿದ್ದರು.
ಭಾರತ ಬಹುತ್ವದ ದೇಶ
ಬಹಳಷ್ಟು ಮಂದಿ ಸಂವಿಧಾನ ವಿರೋಧಿಸುತ್ತಾರೆ, ಭಾರತ ಬಹುಸಂಸ್ಕೃತಿ, ಬಹುತ್ವದ ದೇಶ, ಅನೇಕ ಜಾತಿ, ಧರ್ಮ, ಭಾಷೆಗಳೂ ಇವೆ, ಇದಕ್ಕನುಗುಣವಾದ ಸಂವಿಧಾನವನ್ನು ಡಾ.ಅಂಬೇಡ್ಕರ್ ಕೊಟ್ಟರು.
ಮೂಲಭೂತವಾಗಿ ನಾವೆಲ್ಲಾ ಮನುಷ್ಯರು, ಮಾನವರು ಪರಸ್ಪರ ಪ್ರೀತಿಸಬೇಕೇ ಹೊರತು ದ್ವೇಷ ಸಲ್ಲದು ಎಂಬುದನ್ನು ಡಾ.ಅಂಬೇಡ್ಕರ್ ತಮ್ಮ ಬದುಕಿನಲ್ಲಿ ಸಾರಿದ್ದರು.
ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ನಾನು, ಹಿಂದೂ ಆಗಿ ಹುಟ್ಟಿದ್ದು, ಹಿಂದೂ ಆಗಿ ಸಾಯುವುದಿಲ್ಲ ಎಂದು ತಮ್ಮ ಕಡೇ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದರು, ನಂತರ ಬಹಳ ದಿನಗಳ ಕಾಲ ಅವರು ಉಳಿಯಲಿಲ್ಲ.
ಪ್ರಾಮಾಣಿಕ ಪ್ರಯತ್ನ
ಸಂವಿಧಾನ ಮತ್ತು ಅವರ ಹೋರಾಟ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವೇ ಡಾ.ಅಂಬೇಡ್ಕರ್ ಅವರಿಗೆ ನಾವು ಸಲ್ಲಿಸುವ ಗೌರವ, ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಡ್ರಗ್ಸ್ ಕಂಟ್ರೋಲರ್‌ರನ್ನು ಅಮಾನತು ಮಾಡಲಾಗಿದೆ, ಸಾವು ಏಕೆ ಸಂಭವಿಸಿದೆ ಎಂದು ಪರಿಶೀಲಿಸಲಾಗುವುದು ಎಂದರು.
