ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ಮಾಡಿಸಬೇಕು
ಬೆಂಗಳೂರು:ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವಿನ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಿಂದ ಸಮಗ್ರ ತನಿಖೆ ಮಾಡಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧ ಪೂರೈಕೆ ಆಗುತ್ತಿರುವ ವಿಷಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
327 ಬಾಣಂತಿಯರು ಮೃತ
ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 327 ಬಾಣಂತಿಯರು ಸಾವನ್ನಪ್ಪಿರುವುದಾಗಿ ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಮಾಹಿತಿ ಆಘಾತವುಂಟು ಮಾಡಿದೆ, ವೈದ್ಯ ಕ್ಷೇತ್ರದಲ್ಲಿ ಅಗಾಧ ಮುನ್ನಡೆ ಸಾಧಿಸಿರುವ ಕಾಲದಲ್ಲಿಯೂ ಬಾಣಂತಿಯರು ಆಸ್ಪತ್ರೆಗಳಲ್ಲಿ ಜೀವ ಚೆಲ್ಲುತ್ತಿರುವುದು ಕರ್ನಾಟಕಕ್ಕೆ ಗೌರವ ತರುವ ವಿಚಾರವಲ್ಲ.
ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಕೊಟ್ಟು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದೇವೆ ಎಂಬುದಾಗಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರ, ಆಸ್ಪತ್ರೆಗಳಲ್ಲಿ ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿದೆ.
ಮಗುವಿಗೆ ಜನ್ಮ ನೀಡುವ ವಿಶ್ವಾಸದಿಂದ ಸರ್ಕಾರಿ ಆಸ್ಪತ್ರೆಗೆ ಸೇರುವ ಗೃಹಲಕ್ಷ್ಮಿಯರು ಜೀವಸಮೇತ ಮರಳಿ ಮನೆಗೆ ಬರುವ ಗ್ಯಾರಂಟಿಯೇ ಇಲ್ಲವಾಗಿದೆ, ಇದೇನಾ ಮಹಿಳೆಯರ ಸಬಲೀಕರಣ.
ಕಳಪೆ ಔಷಧಗಳಿಗೆ ಬಲಿ
ಸರ್ಕಾರಿ ಆರೋಗ್ಯ ವ್ಯವಸ್ಥೆ ಪೂರ್ಣ ಹದಗೆಟ್ಟಿದೆ, ಆಸ್ಪತ್ರೆಗಳು ಸಾವಿನ ಕೂಪಗಳಾಗಿ ಮಾರ್ಪಡುತ್ತಿವೆ, ಕಳಪೆ ಗ್ಲೂಕೋಸ್, ಔಷಧಗಳಿಗೆ ಗೃಹಲಕ್ಷ್ಮೀಯರು ಬಲಿಯಾಗುತ್ತಿದ್ದಾರೆ, ಬಳ್ಳಾರಿ ಆಸ್ಪತ್ರೆಯಲ್ಲಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪಡೆದ ಎರಡೇ ಗಂಟೆಯಲ್ಲಿ 9 ಬಾಣಂತಿಯರು ಅಸ್ವಸ್ಥರಾಗಿರುವುದು ಕಳವಳಕಾರಿ ವಿಷಯವಾಗಿದೆ, ಈ ದ್ರಾವಣವನ್ನು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಿದ ಕಂಪನಿ ಯಾವುದು, ಯಾರದ್ದು ಎಂಬುದನ್ನು ಬಹಿರಂಗಪಡಿಸಬೇಕು.
ನನ್ನ ತಪ್ಪಿದ್ದರೆ ರಾಜೀನಾಮೆ ಕೊಡುವೆ ಎಂಬ ಆರೋಗ್ಯ ಸಚಿವರ ಹೇಳಿಕೆ ಅನಪೇಕ್ಷಿತ, ಜವಾಬ್ದಾರಿ ಕೊಟ್ಟಿರುವುದು ಕೈ ತೊಳೆದುಕೊಂಡು ಪಲಾಯನ ಮಾಡಲು ಅಲ್ಲ, ರೋಗಗ್ರಸ್ತ ಆರೋಗ್ಯ ಇಲಾಖೆಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು, ಗೃಹಲಕ್ಷ್ಮೀಯರ ಶಾಪ ಸುಮ್ಮನೆ ಬಿಡುವುದಿಲ್ಲ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಮರಣ ಪ್ರಕರಣಗಳಿಂದ ನುಣಚಿಕೊಳ್ಳಲು ಸಾಧ್ಯವಿಲ್ಲ, ಹದಗೆಟ್ಟ ಆರೋಗ್ಯ ವ್ಯವಸ್ಥೆಯನ್ನು ಹಳಿಗೆ ತರುವ ಕೆಲಸ ತುರ್ತಾಗಿ ಆಗಬೇಕು ಎಂದು ಒತ್ತಾಯಸಿದ್ದಾರೆ.