ಸರ್ಕಾರದ ತರಾಟೆಗೆ ಪ್ರತಿಪಕ್ಷಗಳು ಸಜ್ಜು
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ, ರೈತರು ಮತ್ತು ಮಠ ಮಾನ್ಯಗಳ ಭೂಮಿಯನ್ನು ವಕ್ಫ್ ಬೋರ್ಡ್ ಆಸ್ತಿಯೆಂದು ಒಕ್ಕಲೆಬ್ಬಿಸುತ್ತಿರುವ ವಿವಾದ ಹಾಗೂ ಐದು ಗ್ಯಾರಂಟಿ ಯೋಜನೆಗಳ ಜಾರಿಯಿಂದ ಶಾಸಕರಿಗೆ ಅನುದಾನ ನೀಡಲೂ ಆಗದೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವ ಅಸ್ತ್ರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜ್ಜುಗೊಂಡಿವೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 9ರಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯಗಳೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಕ್ ಸಮರಕ್ಕೆ ಎಡೆ ಮಾಡಿಕೊಡಲಿವೆ.
ಸರ್ಕಾರ ವಿರುದ್ಧದ ಹಗರಣಗಳ ಜೊತೆಗೆ ಆಡಳಿತ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಗಾದಿಗಾಗಿ ನಡೆಯುತ್ತಿರುವ ಆಂತರಿಕ ಹಾಗೂ ಬಹಿರಂಗ ಕಚ್ಚಾಟಗಳೂ ಪ್ರತಿಪಕ್ಷಗಳ ವಾಗ್ದಾಳಿಗೆ ವೇದಿಕೆ ಸೃಷ್ಟಿಸುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಾಸ್ತ್ರ ಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ತಯಾರಿ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ ನಡೆದಿರುವ ಕೋವಿಡ್ ಹಗರಣ, ಬೋವಿ ಮತ್ತು ಇತರ ನಿಗಮಗಳಲ್ಲಿ ನಡೆದಿರುವ ಅವ್ಯವಹಾರಗಳೂ ಸೇರಿದಂತೆ 19 ಆರೋಪಗಳನ್ನು ಪ್ರತಿಪಕ್ಷ ಬಿಜೆಪಿ ಹಾಗೂ ಆ ಪಕ್ಷದ ಶಾಸಕರು ಮತ್ತು ಮುಖಂಡರ ವಿರುದ್ಧ ಹರಿಹಾಯಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ವಕ್ಫ್ ವಿವಾದ ಮುಂದಿಟ್ಟುಕೊಂಡು ಬಿಜೆಪಿ ಬೀದಿಗಿಳಿಯುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ, ಅಧಿವೇಶನ ನಡೆಯುವ ಒಂದು ತಿಂಗಳು ಮುನ್ನವೇ ಹಿರಿಯ ಸಚಿವರ ಸಭೆ ಕರೆದು ಪ್ರತಿಪಕ್ಷವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಪಾಠ ಮಾಡಿದ್ದರು.
ಬಿಜೆಪಿ ಆಡಳಿತದ ವೇಳೆ ನಿಮ್ಮ ಇಲಾಖೆಗಳಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರಗಳನ್ನು ಕೆದಕಿ, ದಾಖಲೆ ಸಹಿತ ಸದನದಲ್ಲಿ ಧೈರ್ಯವಾಗಿ ಮಂಡಿಸಿ ಪ್ರತಿಪಕ್ಷಗಳನ್ನು ಎದುರಿಸಬೇಕು ಎಂದಿದ್ದರು.
ಸದನದಲ್ಲಿ ತಮಗೆ ಎದುರಾಗಬಹುದಾದ ಆರೋಪಗಳ ತೀವ್ರತೆ ಕಡಿಮೆ ಮಾಡುವ ಉದ್ದೇಶದಿಂದ ಏಕಾಏಕಿ ಕೋವಿಡ್ ಹಗರಣದ ಮಧ್ಯಂತರ ವರದಿಯನ್ನು ಕೈಗೆತ್ತಿಕೊಂಡ ಸರ್ಕಾರ ಎಸ್‌ಐಟಿ ತನಿಖೆಗೆ ತೀರ್ಮಾನಿಸಿತು. ಅಲ್ಲದೆ, ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವ ನಿರ್ಧಾರವನ್ನೂ ಕೈಗೊಂಡಿತು, ಇಷ್ಟಾದರೂ ಬಿಜೆಪಿ ಮುಖಂಡರು ಸರ್ಕಾರದ ವಿರುದ್ಧ ಹೋರಾಟ ಕೈಬಿಡಲಿಲ್ಲ.
ಮುಡಾದಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಹಗರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ವಕ್ಫ್ ಮಂಡಳಿಯನ್ನೇ ರದ್ದು ಮಾಡಬೇಕೆಂಬ ಹೋರಾಟಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ. ಒಂದು ವರ್ಗವನ್ನು ಓಲೈಸಿಕೊಳ್ಳಲು ಬಹುಸಂಖ್ಯಾತರ ವಿರುದ್ಧದ ನಿರ್ಣಯಗಳನ್ನು ಸರ್ಕಾರ ಕೈಗೊಳ್ಳುತ್ತಿರುವ ಬಗ್ಗೆ ಪ್ರತಿಪಕ್ಷಗಳು ಸದನದ ಗಮನ ಸೆಳೆಯಲಿವೆ.
ಮುಂಬೈ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಚರ್ಚೆಗೆ ಒತ್ತುಕೊಡುವುದಾಗಿ ಸರ್ಕಾರ ಹಾಗೂ ಉಭಯ ಸದನಗಳ ಪೀಠಾಸೀನಾಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪ್ರತಿ ಬಾರಿ ನಡೆಯುವ ಅಧಿವೇಶನ ಸಂದರ್ಭಗಳಲ್ಲಿ ಸರ್ಕಾರದಿಂದ ಈ ಮಾತುಗಳು ಕೇಳಿಬರುತ್ತವೆ, ಆದರೆ, ಅಲ್ಲಿ ನಡೆಯುವ ಚರ್ಚೆಯೇ ಬೇರೆಯಾಗಿರುತ್ತದೆ, ಆದರೆ, ಈ ಬಾರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಪ್ರತಿಪಕ್ಷ ತನ್ನ ಎಲ್ಲಾ ಅಸ್ತ್ರಗಳನ್ನು ಒಟ್ಟುಗೂಡಿಸಿ ಪ್ರಯೋಗಿಸಲು ಸಜ್ಜಾಗಿದೆ.