ಬೆಳಗಾವಿ:’ಗಾಂಧಿ ಭಾರತ’ ಕಾರ್ಯಕ್ರಮ ಅಂಗವಾಗಿ ಡಿಸೆಂಬರ್ 26 ಹಾಗೂ 27ರಂದು ಬೆಳಗಾವಿ ಜಿಲ್ಲೆಯಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಬೆಳಕವಾಡಿಯ ವೀರಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯಾ ಪೂರ್ವದಲ್ಲಿ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳಾದ ಸವಿನೆನಪಿಗಾಗಿ ಶತಮಾನೋತ್ಸವ ಸಂಭ್ರಮ ಆಚರಿಸಲಾಗುತ್ತಿದೆ ಎಂದರು.
ವರ್ಷಪೂರ್ತಿ ಆಚರಣೆ
ಸರ್ಕಾರ ಹಾಗೂ ಕಾಂಗ್ರೆಸ್‌ನಿಂದ ’ಗಾಂಧಿ ಭಾರತ’ ಸಂಭ್ರಮವನ್ನು ವರ್ಷಪೂರ್ತಿ ಆಚರಿಸಲಾಗುವುದು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಲಾಂಛನ ಅನಾವರಣ ಮಾಡಿದ್ದಾರೆ, ನೂರು ವರ್ಷದ ಹಿಂದೆ ಮಹಾತ್ಮಾ ಗಾಂಧಿ ಅಲಂಕರಿಸಿದ ಸ್ಥಾನದಲ್ಲಿ ಈಗ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಆಸೀನರಾಗಿದ್ದಾರೆ.
ಕಾರ್ಯಕ್ರಮಕ್ಕೆ ರಾಷ್ಟ್ರ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಆಗಮಿಸಲಿದ್ದು, ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಹಾಗೂ ಬೃಹತ್ ಸಾರ್ವಜನಿಕ ಸಭೆ ನಡೆಸುವುದಲ್ಲದೆ, ಗಾಂಧೀಜಿ ಸಂಚರಿಸಿದ್ದ ಸ್ಥಳಗಳಿಗೆ ಭೇಟಿ ನೀಡಲಾಗುವುದು.
ರೂಪುರೇಷೆ ಸಿದ್ಧತೆ
ಸಭೆಗೆ ಮೂರ‍್ನಾಲ್ಕು ಜಾಗಗಳನ್ನು ಗುರುತಿಸಲಾಗಿದೆ, ನಾಳೆ ಅಥವಾ ನಾಡಿದ್ದು ಪಕ್ಷದ ರಾಷ್ಟ್ರೀಯ ನಾಯಕರು ಕಾರ್ಯಕ್ರಮ ಸ್ಥಳ ಪರಿಶೀಲನೆ ನಡೆಸಲಿದ್ದಾರೆ, ಹೆಚ್.ಕೆ ಪಾಟೀಲ್, ವೀರಪ್ಪ ಮೋಯ್ಲಿ, ಬಿ.ಎಲ್.ಶಂಕರ್ ಒಳಗೊಂಡ ಸಮಿತಿ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸಲಿದೆ.
ಕಾರ್ಯಕ್ರಮದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆಗಮಿಸುವ ಸಮಯ ಹಾಗೂ ಭದ್ರತೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.