ಬೆಳಗಾವಿ:ವಿಧಾಸಭಾ ಉಪಚುನಾವಣೆಯಲ್ಲಿ ಆಯ್ಕೆಗೊಂಡ ಕಾಂಗ್ರೆಸ್‌ನ ಸಿ.ಪಿ.ಯೋಗೇಶ್ವರ್ (ಚನ್ನಪಟ್ಟಣ), ಪಠಾಣ್ ಯಾಸಿರ್ ಅಹಮದ್ ಖಾನ್ (ಶಿಗ್ಗಾಂವಿ) ಹಾಗೂ ಅನ್ನಪೂರ್ಣ ತುಕಾರಾಂ (ಸಂಡೂರು) ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸಭೆಯ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ಯು.ಟಿ.ಖಾದರ್, ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.
ಭಗವಂತನ ಹೆಸರಿನಲ್ಲಿ ಪ್ರಮಾಣ
ಯೋಗೇಶ್ವರ್ ಹಾಗೂ ಅನ್ನಪೂರ್ಣ ಅವರು ಭಗವಂತನ ಹೆಸರಿನಲ್ಲೂ, ಯಾಸಿರ್ ಖಾನ್ ತಂದೆ-ತಾಯಿ ಹಾಗೂ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದ ಮೂವರು ಪ್ರತಿಪಕ್ಷ ನಾಯಕರ ಬಳಿ ತೆರಳಿ ಪರಸ್ಪರ ಅಭಿನಂದನೆ ಸಲ್ಲಿಸಿದ ನಂತರ, ಆಡಳಿತ ಪಕ್ಷದ ಸಾಲಿನಲ್ಲಿ ಆಸೀನರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.