ಬೆಂಗಳೂರು:ರಾಜಧಾನಿ ಬೆಂಗಳೂರು ನಗರವನ್ನು ಸಿಲಿಕಾನ್ ಸಿಟಿಯಾಗಿ ವಿಶ್ವಭೂಪಟದಲ್ಲಿ ಕಂಗೊಳಿಸುವಂತೆ ಮಾಡಿದ ಪದ್ಮವಿಭೂಷಣ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (93) ವಿಧಿ ವಶರಾಗಿದ್ದಾರೆ.
ಸುದೀರ್ಘ ಕಾಲದಿಂದ ಉಸಿರಾಟದ ತೊಂದರೆ ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಕೃಷ್ಣ ಅವರು, ಇಂದು ಮುಂಜಾನೆ 2-30ಕ್ಕೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ನಾಳೆ ಬೆಳಗ್ಗೆ 8 ಗಂಟೆವರೆಗೂ ಅವರ ನಿವಾಸದಲ್ಲಿ ಅವಕಾಶ ಮಾಡಿಕೊಡಲಾಗಿದ್ದು, ನಂತರ ಅವರ ಹುಟ್ಟೂರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಗೆ ಕೊಂಡೊಯ್ದು, ಅವರ ಜಮೀನಿನಲ್ಲಿ ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಮೂರು ದಿನ ಶೋಕಾಚರಣೆ
ಕೃಷ್ಣ ಅವರ ಗೌರವಾರ್ಥ ಡಿಸೆಂಬರ್ 11, ಬುಧವಾರದಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ಶೋಕಾಚರಣೆ ಇರಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಎಸ್.ಎಂ.ಕೃಷ್ಣ ಅವರು ಪತ್ನಿ ಪ್ರೇಮಾ, ಇಬ್ಬರು ಪುತ್ರಿಯರಾದ ಮಾಳವೀಕಾ ಮತ್ತು ಶಾಂಭವಿ ಹಾಗೂ ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅಳಿಯ ಕಾಫಿಡೇ ಸಂಸ್ಥಾಪಕ ಸಿದ್ಧಾರ್ಥ ಆತ್ಮಹತ್ಯೆ ನಂತರ ಕೃಷ್ಣ ಅವರು ಮಾನಸಿಕವಾಗಿ ಬಹಳ ಕುಗ್ಗಿದ್ದರು.
1932ರ ಮೇ 1ರಂದು ಸೋಮನಹಳ್ಳಿಯಲ್ಲಿ ಎಸ್.ಸಿ.ಮಲ್ಲಯ್ಯ ಮತ್ತು ತಾಯಮ್ಮ ದಂಪತಿಯ ಪುತ್ರರಾಗಿ ಜನಿಸಿದ ಎಸ್.ಎಂ.ಕೃಷ್ಣ ಅವರು ಪ್ರಾಥಮಿಕ ಶಿಕ್ಷಣವನ್ನು ಮದ್ದೂರಿನಲ್ಲಿ ನಂತರ ಪದವಿ ಶಿಕ್ಷಣವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದರು.

ಕಾನೂನು ಪದವಿ
ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪದವಿ ಪಡೆದು ಅಮೆರಿಕದ ಟೆಕ್ಸಾಸ್‌ನಲ್ಲಿ ಉನ್ನತ ವ್ಯಾಸಂಗ ಮುಗಿಸಿ, ಭಾರತಕ್ಕೆ ಹಿಂತಿರುಗಿ ರೇಣುಕಾಚಾರ್ಯ ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು.
1962ರಲ್ಲಿ ರಾಜಕೀಯ ಬದುಕು ಆರಂಭಿಸಿದ ಅವರು, ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ವಿಧಾನಸಭೆ ಪ್ರವೇಶಿಸಿದರು.
1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, 1971ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಮರು ಆಯ್ಕೆಗೊಂಡರು.
ರಾಷ್ಟ್ರ ರಾಜಕಾರಣಕ್ಕೆ
1972ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿ, ನಂತರ ರಾಷ್ಟ್ರ ರಾಜಕಾರಣಕ್ಕೆ ತೆರಳಿ ಇಂದಿರಾ ಗಾಂಧಿ ಆಡಳಿತದಲ್ಲಿ ಕೈಗಾರಿಕಾ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದರು.
ರಾಷ್ಟ್ರದ ನಾಲ್ಕೂ ಸದನಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಕೆಲವೇ ವ್ಯಕ್ತಿಗಳಲ್ಲಿ ಎಸ್.ಎಂ.ಕೃಷ್ಣ ಒಬ್ಬಾರಾಗಿದ್ದು, ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರಾಗಿದ್ದರು.
ಮುಖ್ಯಮಂತ್ರಿ ದೇವರಾಜ ಅರಸ್ ಸಂಪುಟದಲ್ಲಿ ಸಚಿವರಾಗಿ, ಎಸ್.ಬಂಗಾರಪ್ಪ ಆಡಳಿತಾವಧಿಯಲ್ಲಿ ವಿಧಾನಸಭಾಧ್ಯಕ್ಷರಾಗಿ, ವೀರಪ್ಪ ಮೊಯಿಲಿ ಆಡಳಿತದಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಕಾಂಗ್ರೆಸ್ ಅಧಿಕಾರಕ್ಕೆ
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ 1999ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು 2004ರವರೆಗೆ ಮುಖ್ಯಮಂತ್ರಿಯಾಗಿ ಕಾರ್ಯಭಾರ ನಡೆಸಿದರು.
ನಂತರ ಕೇಂದ್ರ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ, 2008ರಲ್ಲಿ ರಾಜ್ಯಪಾಲ ಹುದ್ದೆ ತೊರೆದು ಮತ್ತೆ ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೃಷ್ಣ ಅವರು, ಅಲ್ಪದಿನಗಳಲ್ಲೇ ಸಕ್ರಿಯ ರಾಜಕೀಯದಿಂದ ನಿವೃತ್ತಿ ಘೋಷಿಸಿ ವಿಶ್ರಾಂತ ಬದುಕು ನಡೆಸುತ್ತಿದ್ದರು.