ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಏಳು ಮಂದಿಗೆ ರಾಜ್ಯ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಹಸಿರು ನಿಶಾನೆ ತೋರಿದೆ.
ದರ್ಶನ್ ಹಾಗೂ ಇತರರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು, ಪವಿತ್ರಗೌಡ ಅಲ್ಲದೆ, ಪ್ರದೂಷ್, ಜಗದೀಶ್, ನಾಗರಾಜು, ಲಕ್ಷ್ಮಣ್ ಅವರಿಗೂ ಜಾಮೀನು ಮಂಜೂರು ಮಾಡಿದ್ದಾರೆ.
ಎಲ್ಲಾ ಆರೋಪಿಗಳಿಗೂ ಜಾಮೀನು
ಈಗಾಗಲೇ ನಾಲ್ಕು ಮಂದಿಗೆ ಜಾಮೀನು ದೊರೆತಿರುವ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲಾ 11 ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಾದ-ಪ್ರತಿವಾದ ಆಲಿಸಿ, ಇದೇ ೯ರಂದು ಕಾಯ್ದಿರಿಸಿದ ತೀರ್ಪನ್ನು ಏಕಸದಸ್ಯ ಪೀಠ ಇಂದು ಮಧ್ಯಾನ್ಹ ಪ್ರಕಟಿಸಿತು.
ಎಲ್ಲಾ ಜಾಮೀನು ಅರ್ಜಿಗಳನ್ನು ಪುರಸ್ಕರಿಸಲಾಗಿದೆ, ಅವರುಗಳು ತಲಾ ಇಬ್ಬರ ಜಾಮೀನು ನೀಡಿ, ಪೀಠ ನೀಡುವ ವಿಸ್ತಾರವಾದ ಆದೇಶದಲ್ಲಿ ತಿಳಿಸುವಂತೆ ಕೆಳಹಂತದ ನ್ಯಾಯಾಲಯದ ಷರತ್ತುಗಳನ್ನು ಪೂರೈಸಬೇಕು ಎಂದಿದೆ.
ಕೊಲೆಯಲ್ಲಿ ಪಾತ್ರ ಇಲ್ಲ
ದರ್ಶನ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್, ಈ ಕೊಲೆಯಲ್ಲಿ ನಮ್ಮ ಕಕ್ಷಿದಾರ ದರ್ಶನ್ ಪಾತ್ರ ಇಲ್ಲ, ಪೋಲಿಸರು ಕೆಲವು ಉತ್ಪ್ರೇಕ್ಷಿತ ಆರೋಪಗಳನ್ನು ಮಾಡಿದ್ದಾರೆ ಎಂದು ವಾದ ಮಂಡಿಸಿ, ಜಾಮೀನು ನೀಡುವಂತೆ ಪೀಠಕ್ಕೆ ಮನವಿ ಮಾಡಿದ್ದರು.
ಪವಿತ್ರಗೌಡ ಪರ ವಾದ ಮಂಡಿಸಿದ್ದ ಸಬಾಸ್ಟಿಯನ್ ಹಾಗೂ ಶಿಲ್ಪ, ಆಕೆ ಒಬ್ಬ ಮಹಿಳೆ ಎಂಬುದರ ಜೊತೆಗೆ ಪ್ರಕರಣದಲ್ಲಿ ಅವರ ಪಾತ್ರ ಇಲ್ಲ, ಅಪಹರಣದಲ್ಲಾಗಲಿ, ಕೊಲೆಗಾಗಲಿ ಅವರ ಕುಮ್ಮಕ್ಕು ಇರಲಿಲ್ಲ ಎಂದು ವಾದಿಸಿದ್ದರು.
ಎಲ್ಲಾ ಆರೋಪಿಗಳನ್ನು ನಗರದ ಪರಪ್ಪನ ಅಗ್ರಹಾರದಲ್ಲಿ ಸೆರೆಯಲ್ಲಿ ಇಡಲಾಗಿತ್ತು. ದರ್ಶನ್‌ಗೆ ಸೆರಮನೆಯಲ್ಲಿ ಮೋಜು, ಮಸ್ತಿ ಮಾಡಲು ಅವಕಾಶ ನಿಡಲಾಗಿದೆ ಎಂಬ ಆರೋಪದ ಮೇಲೆ ಕೆಲವು ಆರೋಪಿಗಳನ್ನು ವಿವಿಧ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗಿತ್ತು.
ಬಿಜಿಎಸ್ ಆಸ್ಪತ್ರೆಗೆ ದಾಖಲು
ದರ್ಶನ್ ಬಳ್ಳಾರಿ ಜೈಲಿನಲ್ಲಿರುವಗಲೇ ಆರೋಗ್ಯ ಹದಗೆಟ್ಟು ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಪಡೆಯಲು ಮಧ್ಯಂತರ ಜಾಮೀನು ಪಡೆದು ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರಿಗೆ ಇದುವರೆಗೂ ಶಸ್ತ್ರ ಚಿಕಿತ್ಸೆ ನಡೆದಿಲ್ಲ, ಹೈಕೋರ್ಟ್ ಜಾಮೀನು ನೀಡಿದರೂ ಅವರು ಸದಸ್ಯಕ್ಕೆ ಹೊರಬರುವ ಸಾಧ್ಯತೆ ಇಲ್ಲ.
ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತಿರುವುದರಿಂದ ಅವರು ಆಸ್ಪತ್ರೆಯಲ್ಲೇ ಮುಂದುವರೆಯಲಿದ್ದಾರೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ದರ್ಶನ್ ಚಿಕಿತ್ಸೆ ನಿರ್ಧಾರವಾಗಲಿದೆ.