ಬೆಳಗಾವಿ:ಅಧಿಕಾರಾವಧಿಯಲ್ಲಿ ಬಿಜೆಪಿ ಮುಖಂಡರು ಮಾಡಿರುವ ಭ್ರಷ್ಟಾಚಾರಗಳನ್ನು ಮತ್ತೆ ವಿಧಾನಸಭೆಯಲ್ಲಿ ದಾಖಲೆಗಳ ಸಹಿತ ಪ್ರಸ್ತಾಪಿಸಿ ಪ್ರತಿಪಕ್ಷವನ್ನು ಕಟ್ಟಿಹಾಕಲು ನಿರ್ಧರಿಸಲಾಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಶುಕ್ರವಾರ ರಾತ್ರಿ ಸಂಪುಟ ಸಭೆ ಮುಗಿದ ನಂತರ ಅನೌಪಚಾರಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ವಿಷಯ ಪ್ರಸ್ತಾಪಿಸಿ, ಬಿಜೆಪಿಯ ಎಲ್ಲಾ ಹಗರಣಗಳನ್ನು ಬಯಲು ಮಾಡಲು ಸಜ್ಜಾಗಿ ಹೋರಾಟ ನಡೆಸಿ ಎಂದಿದ್ದಾರೆ.
ಪಂಚಮಸಾಲಿ ಮೀಸಲಾತಿ
ಸೋಮವಾರದಿಂದ ಪುನರಾರಂಭಗೊಳ್ಳುವ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಪಂಚಮಸಾಲಿ ಮೀಸಲಾತಿ ಹೋರಾಟ ಸೇರಿದಂತೆ ಕೆಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಎರಗಲು ಸಿದ್ಧಗೊಂಡಿದ್ದಾರೆ.
ಪಂಚಮಸಾಲಿ ವಿಷಯವನ್ನು ರಾಜಕೀಯವಾಗಿ ಪರಿವರ್ತಿಸಲು ಹೊರಟಿದ್ದು, ಇದಕ್ಕೆ ಅವಕಾಶ ನೀಡಬಾರದು, ನಾವು ಅವರ ವಿರುದ್ಧ ಒಗ್ಗಟ್ಟಿನಿಂದ ಪ್ರತಿ ದಾಳಿ ನಡೆಸಬೇಕು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಯಿ ಸೇರಿದಂತೆ ಆ ಪಕ್ಷದ ಮುಖಂಡರು ಮಾಡಿರುವ ಹಗರಣ ಮತ್ತಿತರ ವಿಷಯಗಳಲ್ಲಿ ಕಾನೂನಿನಡಿ ಕ್ರಮ ಜರುಗುತ್ತಿಲ್ಲ.
ಸದನದಲ್ಲಿ ಚರ್ಚೆ
ನ್ಯಾಯಾಲಯದಲ್ಲಿ ನಡೆದಿರುವ ವಿಷಯಗಳ ಕುರಿತು ಸದನದಲ್ಲಿ ಚರ್ಚೆ ಮಾಡಿ ಎಲ್ಲವನ್ನೂ ಬಹಿರಂಗಪಡಿಸೋಣ.
ಅಭಿವೃದ್ಧಿ ಹೊರತುಪಡಿಸಿ ಬೇಡದ ವಿಷಯಗಳನ್ನು ಪ್ರಸ್ತಾಪಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದಾರೆ, ಅವರಿಗೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ಸರ್ಕಾರದ ಕಾರ್ಯಕ್ರಮಗಳ ಲೋಪದ ಬಗ್ಗೆ ಚರ್ಚೆ ನಡೆಸುವ ಮನಃಸ್ಥಿತಿ ಇಲ್ಲ.
ಉಳಿದಿರುವ ಐದು ದಿನಗಳ ಕಲಾಪವನ್ನು ಪಂಚಮಸಾಲಿ, ಮುಡಾ, ಬಾಣಂತಿಯರ ಸಾವು ಸೇರಿದಂತೆ ಕೆಲವು ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ಹೊರಟಿದ್ದಾರೆ.
ಆಕಸ್ಮಿಕ ತಪ್ಪುಗಳು
ಆಡಳಿತದಲ್ಲಿನ ಆಕಸ್ಮಿಕ ತಪ್ಪುಗಳನ್ನೇ ದೊಡ್ಡದಾಗಿ ಬಿಂಬಿಸಲು ಹೊರಟಿದ್ದಾರೆ, ನಾವೂ ಸಹಾ ಅವರ ಆಡಳಿತದಲ್ಲಿ ನಡೆದಿರುವ ೨೩ ಹಗರಣಗಳನ್ನು ಎಳೆ ಎಳೆಯಾಗಿ ಬಿಡಿಸಿಡೋಣ.
ಪಂಚಮಸಾಲಿ ಹೋರಾಟ ಮಾಡಿದರೆಂದಾಕ್ಷಣ ತಲೆ ಬಾಗಬೇಕಿಲ್ಲ, ಕಾನೂನಾತ್ಮಕವಾಗಿ ಏನು ಸಾಧ್ಯವೋ, ಅದನ್ನು ಮಾಡೋಣ, ಅವರು ಅನ್ಯಾಯ ಮಾಡಿದರೆಂದು ನಾವು ಇನ್ನೊಂದು ಸಮಾಜಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ.
ವಿಧಾನಸಭೆಯಷ್ಟೇ ಅಲ್ಲದೆ, ಪರಿಷತ್‌ನಲ್ಲೂ ಸಚಿವರುಗಳು ಹಾಜರಿದ್ದು ಅವರ ರಾಜಕೀಯ ಅಸ್ತ್ರಗಳಿಗೆ ನಾವೂ ಪ್ರತ್ಯಾಸ್ತ್ರ ಬಿಡೋಣ ಎಂದಿದ್ದಾರೆ.