ಬೆಳಗಾವಿ:ಅಲ್ಪ ಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರಿಗೆ 150 ಕೋಟಿ ರೂ. ಆಮಿಷ ಒಡ್ಡಿದ್ದೇನೆ ಎಂಬ ಆರೋಪದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ನಿಮಗೆ ಸಿಬಿಐ ಮೇಲೆ ವಿಶ್ವಾಸ ಕೊನೆಗೂ ಬಂದಂತಿದೆ, ನನ್ನ ಮೇಲಿನ ಆರೋಪವೂ ಸೇರಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ 5,000 ಕೋಟಿ ರೂ.ಗಳ ಬಿಡಿ ನಿವೇಶನ ಹಗರಣ, ವಕ್ಫ್ ಅವ್ಯವಹಾರಕ್ಕೆ ಸಂಬಂಧಿಸಿದ ಮಾಣಿಪ್ಪಾಡಿ ಅವರು ನೀಡಿರುವ ವರದಿ ಆಧಾರದ ಮೇಲೆ, ಅಂದಿನ ಉಪಲೋಕಾಯುಕ್ತರ ವರದಿ ಹಾಗೂ ಅಬಕಾರಿ ಭ್ರಷ್ಟಾಚಾರದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಸಿಬಿಐಗೆ ವಹಿಸಿ ಎಂದು ಆಗ್ರಹಿಸಿದರು.
ಜನರ ದಿಕ್ಕು ತಪ್ಪಿಸಲು ಆರೋಪ
ಸರಣಿ ಹಗರಣಗಳಲ್ಲಿ ಸಿಲುಕಿ ವಿಲವಿಲ ಒದ್ದಾಡುತ್ತಿರುವ ನೀವು, ಜನರ ದಿಕ್ಕು ತಪ್ಪಿಸಲು ಇಂತಹ ಚಿಲ್ಲರೆ ಆರೋಪಗಳನ್ನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿರುವ ವಿಜಯೇಂದ್ರ, ನಾನ್ಯಾತಕ್ಕೆ ವರದಿ ನೀಡಬೇಡ ಎಂಬುದಾಗಿ ಮಾಣಿಪ್ಪಾಡಿ ಅವರಿಗೆ ಆಮಿಷ ಒಡ್ಡಲಿ.
ಕಾಂಗ್ರೆಸ್ ನಾಯಕರು ಲಕ್ಷಾಂತರ ಕೋಟಿ ರೂ. ಮೌಲ್ಯದ ವಕ್ಫ್ ಆಸ್ತಿ ನುಂಗಿ ನೀರು ಕುಡಿದಿದ್ದಾರೆ, ಅವರ ರಕ್ಷಣೆ ಉದ್ದೇಶದಿಂದ ಉಪಲೋಕಾಯುಕ್ತರು ನೀಡಿದ ವರದಿಯನ್ನು ನೀವು ಸ್ವೀಕರಿಸಲಿಲ್ಲ ಎಂದು ಆರೋಪಿಸಿದರು.
ನನ್ನ ಮೇಲಿನ ಆರೋಪ ಸೇರಿದಂತೆ ಉಳಿದ ಎಲ್ಲಾ ಪ್ರಕರಣಗಳನ್ನೂ ಸಿಬಿಐಗೆ ವಹಿಸಿ, ಪ್ರಧಾನಿ ಅವರು ಪ್ರತ್ಯೇಕ ತೀರ್ಮಾನ ತೆಗೆದುಕೊಳ್ಳುವ ಅಗತ್ಯವಿಲ್ಲ, ನೀವೇ ಸಂಪುಟದಲ್ಲಿ ನಿರ್ಧಾರ ಕೈಗೊಂಡು ತನಿಖೆಗೆ ನೀಡಿ ಎಂದು ಸವಾಲು ಹಾಕಿದರು.
ವಕ್ಫ್ ಜಾಗ ಅವ್ಯವಹಾರ
ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲಿನ 150 ಕೋಟಿ ರೂ. ಆಮಿಷ ಆರೋಪದ ಜೊತೆಗೆ ಅನ್ವರ್ ಮಾಣಿಪ್ಪಾಡಿ ವರದಿ ಸ್ವೀಕರಿಸಿ, ಅದರ ಬಗ್ಗೆಯೂ ಸಿಬಿಐ ತನಿಖೆ ಮಾಡಿಸಿ, ವಕ್ಫ್ ಜಾಗದ ವಿಚಾರದಲ್ಲಿ ಲಕ್ಷ ಲಕ್ಷ ಕೋಟಿ ರೂ. ಅವ್ಯವಹಾರ ಆಗಿದೆ ಎಂಬ ವರದಿ ಇದೆ, ಅದರ ಸಮಗ್ರ ತನಿಖೆಯೂ ಆಗಲಿ ಎಂದರು.
ಆಡಳಿತ ಪಕ್ಷದವರು ಕೆಲಸಕ್ಕೆ ಬಾರದ ಸಂಗತಿಗಳನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ, ಬಾಣಂತಿಯರ ಸಾವು, ಹಸುಗೂಸುಗಳ ಮರಣ, ಉತ್ತರ ಕರ್ನಾಟಕದ ವಿಚಾರಗಳು ಸದನದಲ್ಲಿ ಚರ್ಚೆ ಆಗಬಾರದೆಂಬ ಉದ್ದೇಶ ಇದರ ಹಿಂದಿದೆ.
ಯಡಿಯೂರಪ್ಪ ಅವರು, ತಮ್ಮ ಆಡಳಿತಾವಧಿಯಲ್ಲಿ ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿದ್ದರು, ಆದರೆ, ಅವರನ್ನೇ ಗುರಿಯಾಗಿಸಿ ರಾಜಕೀಯವಾಗಿ ಮುಗಿಸುವ ದುರುದ್ದೇಶದಿಂದ ಅರೆಬರೆ ಬೆಂದ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹ ಅವರ ಮಧ್ಯಂತರ ವರದಿ ಇಟ್ಟುಕೊಂಡು ಎಫ್‌ಐಆರ್ ದಾಖಲಿಸಿದ್ದಲ್ಲದೆ, ಶಾಸಕ ಮುನಿರತ್ನ ವಿಚಾರವನ್ನೂ ಚರ್ಚಿಸಲು ಮುಂದಾಗಿದ್ದಾರೆ.
ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ
ಸಿದ್ದರಾಮಯ್ಯನವರೇ ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ, ಇದ್ಯಾವುದೂ ಹೊಸದಲ್ಲ, ಸಿಎಜಿ ವರದಿ ಸಂಬಂಧ 25 ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ದಾಖಲಿಸಿ, ಯಡಿಯೂರಪ್ಪ ಅವರೊಂದಿಗೆ ಬಿಜೆಪಿಯನ್ನೂ ಮುಗಿಸಲು ಪಿತೂರಿ ಮಾಡಿತು.
ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗದು ಎಂಬ ಆಲೋಚನೆಯಿಂದ ಇಂತಹ ಕೆಲಸ ಮಾಡಿದ್ದರು.
ಸಚಿವ ಪ್ರಿಯಾಂಕ್ ಖರ್ಗೆ ನನ್ನ ಮೇಲೆ ಆರೋಪ ಮಾಡಿದ್ದು, ಇತ್ತೀಚೆಗೆ ಅವರ ಬಂಡವಾಳವೂ ಬಯಲಾಗಿದೆ, ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನೂರಾರು ಕೋಟಿ ರೂ. ಬೆಲೆಬಾಳುವ 5 ಎಕರೆ ಭೂಮಿಯನ್ನು ಅವರ ಸಹೋದರ ರಾಹುಲ್ ಖರ್ಗೆಗೆ ಅಕ್ರಮವಾಗಿ ಮಂಜೂರು ಮಾಡಿಸಿಕೊಂಡು ನಂತರ ಹಿಂತಿರುಗಿಸಲಿಲ್ಲವೇ ಎಂದು ಪ್ರಶ್ನಿಸಿದರು.