ಬೆಂಗಳೂರು:ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಸಬೇಕು ಎಂದು ಒಂದು ಬಣ ವಾದಿಸಿದರೆ, ಇನ್ನೊಂದು ಬಣ ಅವರನ್ನು ಕೆಳಗಿಳಿಸಬೇಕೆಂದು ಒತ್ತಾಯಿಸಿ ದಾವಣಗೆರೆಯಲ್ಲಿ ಪ್ರತ್ಯೇಕ ಸಮಾವೇಶಗಳನ್ನು ಹಮ್ಮಿಕೊಂಡಿವೆ.
ಫೆಬ್ರವರಿ 27ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ವಿಜಯೇಂದ್ರ ಬೆಂಬಲಿಗರು ದಾವಣಗೆರೆಯಲ್ಲಿ ಸಮಾವೇಶ ಹಮ್ಮಿಕೊಂಡಿದ್ದಾರೆ.
ಸಮಾವೇಶಕ್ಕೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ದೆಹಲಿಯಲ್ಲಿ ಬಿಡಾರ ಹೂಡಿದ್ದಾರೆ.
ಸಂಕ್ರಾಂತಿ ನಂತರ ವಿರೋಧಿ ಸಮಾವೇಶ
ಇದಕ್ಕೂ ಮುನ್ನ ವಿರೋಧಿ ಬಣ ಸಂಕ್ರಾಂತಿ ನಂತರ ಜನವರಿಯಲ್ಲೇ ದಾವಣಗೆರೆಯಲ್ಲೇ ಸಮಾವೇಶದ ಸಿದ್ಧತೆ ನಡೆಸಿದೆ.
ಸಮಾವೇಶಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ.
ದೇವೇಂದ್ರ ಫಡ್ನವೀಸ್ ಭೇಟಿ
ವಿರೋಧಿ ಬಣದ ಪ್ರಮುಖ ನಾಯಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿ ಮುಂಬೈನಲ್ಲಿ ಫಡ್ನವೀಸ್ ಅವರನ್ನು ಭೇಟಿ ಮಾಡಿ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ.
ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ನಂತರದ ಬೆಳವಣಿಗೆಗಳನ್ನು ಅವರ ಗಮನಕ್ಕೆ ತಂದಿರುವುದಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆ ಎದುರಿಸಲು ಸಮರ್ಥ ನಾಯಕರೊಬ್ಬರು ಬೇಕು ಎಂದು ತಿಳಿಸಿದ್ದಾರೆ.
ಫಡ್ನವೀಸ್ ಭೇಟಿ ವೇಳೆ ಯಡಿಯೂರಪ್ಪ ಮೊಮ್ಮಗ ಹಾಗೂ ಜೆಡಿಎಸ್ ನಾಯಕ ಸಂತೋಷ್ ಸೇರಿದಂತೆ ಮಾಜಿ ಶಾಸಕರುಗಳಿದ್ದರು.
ಪರ್ಯಾಯ ಸಭೆಗಳು
ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಪರ್ಯಾಯವಾಗಿ ಸಭೆ ಮತ್ತು ರ‍್ಯಾಲಿಗಳನ್ನು ನಡೆಸಿ, ರಾಜ್ಯಾಧ್ಯಕ್ಷರ ವಿರುದ್ಧವೇ ಹರಿಹಾಯ್ದಿದ್ದರು.
ಇದನ್ನು ವಿರೋಧಿಸಲೆಂದೇ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೇಣುಕಾಚಾರ್ಯ ನಿಷ್ಠಾವಂತ ಬಣ ಎಂಬುದಾಗಿ ಗುರುತಿಸಿಕೊಂಡು ಸಭೆಗಳನ್ನು ನಡೆಸಿ ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರನ್ನು ಬೆಂಬಲಿಸಿದರು.
ಎರಡೂ ಬಣಗಳು ಬೀದಿಗಿಳಿಯುತ್ತಿದ್ದಂತೆ ಎಚ್ಚೆತ್ತ ಪಕ್ಷದ ವರಿಷ್ಠರು ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಿದ್ದಲ್ಲದೆ, ದೆಹಲಿಗೆ ಕರೆಸಿಕೊಂಡು ಚರ್ಚಿಸಿದರು.
ದಾವಣಗೆರೆಯಲ್ಲೇ ಸಮಾವೇಶ
ಇದಾದ ನಂತರವೂ ಯತ್ನಾಳ್, ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧದ ತಮ್ಮ ನಿಲುವು ಬದಲಿಸದೆ, ಹಿಂದಿನ ದಾಟಿಯಲ್ಲೇ ವಾಗ್ದಾಳಿ ಮುಂದುವರೆಸಿರುವುದಲ್ಲದೆ, ದಾವಣಗೆರೆಯಲ್ಲೇ ಸಮಾವೇಶ ನಡೆಸಲು ಹೊರಟಿದ್ದಾರೆ.
ಬಿಜೆಪಿ ಎರಡೂ ಬಣಗಳ ಆಂತರಿಕ ಜಗಳ ತಾರಕಕ್ಕೇರಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರಿಗೆ ಇನ್ನಷ್ಟು ತಲೆ ನೋವಾಗಿ ಪರಿಣಮಿಸಲಿದೆ.