ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಶಸ್ತ್ರಚಿಕಿತ್ಸೆ ಇಲ್ಲದೆ ಆಸ್ಪತ್ರೆಯಿಂದ ಇಂದು ಬಿಡುಗಡೆಯಾಗಿದ್ದಾರೆ.
ಬೆನ್ನು ನೋವು ಚಿಕಿತ್ಸೆಗೆಂದು ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಸೇರಿದ್ದ ದರ್ಶನ್ 48 ದಿನಗಳಿಂದ ವೈದ್ಯರ ನಿಗಾದಲ್ಲಿದ್ದರು.
ಬೆನ್ನುನೋವು ಚಿಕಿತ್ಸೆಗೆಂದು ನವೆಂಬರ್ ಒಂದರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ
ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಈ ಮಧ್ಯೆ, ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಕೊಲೆ ಪ್ರಕರಣದ ಇತರ ಎಲ್ಲಾ 11 ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡತ್ತು.
ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ದರ್ಶನ್ ಅವರನ್ನು ಕರೆದೊಯ್ಯಲು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ಆಪ್ತರು ಆಗಮಿಸಿದ್ದರು.
ವಿಜಯಲಕ್ಷ್ಮಿ ಮನೆಗೆ
ಆಸ್ಪತ್ರೆಯಿಂದ ಹೊರಬರುತ್ತಲೇ ದರ್ಶನ್ ಕಾರ್ ಹತ್ತಿ ನೇರವಾಗಿ ಹೊಸಕೆರೆಹಳ್ಳಿಯಲ್ಲಿ ಪತ್ನಿ ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್‌ಮೆಂಟ್‌ಗೆ ತೆರಳಿದರು.
ತೀವ್ರ ಬೆನ್ನುನೋವು ಎಂಬ ಅನಾರೋಗ್ಯ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್ ಅವರಿಗೆ ಇದೇ 11 ರಂದು ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂಬುದಾಗಿ ನ್ಯಾಯಾಲಯಕ್ಕೆ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಮಾಹಿತಿ ನೀಡಿದ್ದರಾದರೂ, ನಂತರ ಶಸ್ತ್ರಚಿಕಿತ್ಸೆ ಬದಲಿಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡುವುದಾಗಿ ವೈದ್ಯರು ಸೂಚಿಸಿದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಿಲ್ಲ ಎಂದು ಮೂಲಗಳು ತಿಳಿಸಿವೆ.