ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಬಿಡಿ ನಿವೇಶನ ಪಡೆದಿರುವ ಪಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಸಂಬಂಧ ಜನವರಿ 15ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೈಕೋರ್ಟ್ ಇಂದಿಲ್ಲಿ ತಿಳಿಸಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ಮುಂದುವರೆದ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಮುಂದಿನ ವಿಚಾರಣಾ ದಿನಾಂಕದೊಳಗೆ ಎಲ್ಲಾ ಪ್ರತಿವಾದಿಗಳಿಗೂ ನೋಟಿಸ್ ಜಾರಿಯಾಗಬೇಕು ಎಂದು ಸೂಚಿಸಿದರು.
ಹ್ಯಾಂಡ್ ಸಮನ್ಸ್
ಹೈಕೋರ್ಟ್ ಮುಂಭಾಗದ ಕಟ್ಟಡದಲ್ಲಿರುವ ಪ್ರತಿವಾದಿಗೆ 35 ದಿನಗಳಾದರೂ ನೋಟಿಸ್ ಜಾರಿಯಾಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಎಲ್ಲಾ ಪ್ರತಿವಾದಿಗಳಿಗೆ ಹ್ಯಾಂಡ್ ಸಮನ್ಸ್ ನೀಡುವಂತೆ ಆದೇಶಿಸಿದರು.
ಲೋಕಾಯುಕ್ತ ಡಿಸೆಂಬರ್ 24ಕ್ಕೆ ತನಿಖಾ ವರದಿ ನೀಡಬೇಕಿತ್ತು, ಆದರೆ, ಅದು ಮತ್ತಷ್ಟು ಸಮಯಾವಕಾಶ ಕೋರಿದ್ದರಿಂದ ನಾವು ವಿಚಾರಣೆ ಕೈಗೊಳ್ಳುವ ಹಿನ್ನೆಲೆಯಲ್ಲಿ ನೀವು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಆದೇಶಿಸಿದರು.
ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ಮುಖ್ಯಮಂತ್ರಿ ಪರ ವಕೀಲ ರವಿವರ್ಮ ಕುಮಾರ್, ಆಕ್ಷೇಪ ವ್ಯಕ್ತಪಡಿಸಿ, ತಮ್ಮ ವಾದವನ್ನೂ ಆಲಿಸುವಂತೆ ಪೀಠಕ್ಕೆ ಮನವಿ ಮಾಡಿದರು.
ಆತುರದ ಆದೇಶ ಬೇಡ
ಆತುರದಿಂದ ನ್ಯಾಯಾಲಯ ಮಧ್ಯಂತರ ಆದೇಶ ನೀಡಬಾರದು, ಲೋಕಾಯುಕ್ತ ತನಿಖೆಯಲ್ಲಿ ಕೋರ್ಟ್ ಮಧ್ಯೆ ಪ್ರವೇಶಿಸಬಾರದು.
ಅರ್ಜಿದಾರರು ಲೋಕಾಯುಕ್ತ ತನಿಖೆಗೆ ತಡೆಯಾಜ್ಞೆ ಕೋರಿಲ್ಲ, ಸ್ವಯಂಪ್ರೇರಿತವಾಗಿ ಆದೇಶ ನೀಡಬಾರದು ಎಂದು ಮನವಿ ಮಾಡಿದರು.
ನ್ಯಾಯಪೀಠಕ್ಕೆ ಮನವಿ
ರವಿಕುಮಾರ್ ಮನವಿಗೆ, ಸುಪ್ರೀಂಕೋರ್ಟ್ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಹಾಗೂ ಕಪಿಲ್ ಸಿಬಲ್ ಧ್ವನಿಗೂಡಿಸಿದರು.
ಮುಖ್ಯಮಂತ್ರಿ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು, ತಮ್ಮ ಮಧ್ಯಂತರ ಆದೇಶ ಹಿಂಪಡೆದು, ಲೋಕಾಯುಕ್ತಕ್ಕೆ ತನಿಖೆ ನಡೆಸಿ, ಜನವರಿ 28ರ ವೇಳೆಗೆ ವರದಿ ನೀಡುವಂತೆ ಕಾಲಾವಕಾಶ ನೀಡಿದರು.
ಸಿಬಿಐಗೆ ವಹಿಸುವ ಸಂಬಂಧದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಪರ ವಕೀಲರು, ತಮ್ಮ ಕಕ್ಷಿದಾರರಿಗೆ ನೋಟಿಸ್ ಜಾರಿಯಾಗಿಲ್ಲ, ವಿಚಾರಣೆ ಮುಂದೂಡಿ ಎಂದು ಮನವಿ ಮಾಡಿದರು.
ವಕೀಲರ ಆಕ್ಷೇಪ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ನೇಹಮಯಿ ಕೃಷ್ಣ ಪರ ವಕೀಲ ರಾಘವನ್, ಹೈಕೋರ್ಟ್ ಮುಂಭಾಗದಲ್ಲಿರುವ ಕಟ್ಟಡಕ್ಕೆ ನೋಟಿಸ್ ಜಾರಿಯಾಗಲು ಒಂದು ತಿಂಗಳು ಕಾಲಾವಕಾಶ ಬೇಕೆ ಎಂದು ವಾದ ಮುಂದಿಟ್ಟರು.
ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಜನವರಿ 15ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಮತ್ತೆ ಮುಂದೂಡಲು ಸಾಧ್ಯವಿಲ್ಲ, ಅಷ್ಟರಲ್ಲಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಎಂದು ಆದೇಶಿಸಿದರು.