ನವದೆಹಲಿ:ಕರ್ನಾಟಕ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ವರಿಷ್ಠರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿದ್ದ ವಿಜಯೇಂದ್ರ ವರಿಷ್ಠರ ಕರೆಯ ಮೇರೆಗೆ ಬೆಳಗಾವಿಯಿಂದಲೇ ದೆಹಲಿಗೆ ತೆರಳಿ, ಪ್ರಧಾನಿ ಅವರನ್ನು ಸಂಸತ್ ಭವನದಲ್ಲಿ ಭೇಟಿ ಮಾಡಿದ್ದಾರೆ.
ರಾಜಕೀಯ ಸಂಚಲನ
ಬಣ ರಾಜಕೀಯ ಜೊತೆಗೆ ವಿಧಾನಸಭಾ ಅಧಿವೇಶನ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ರಾಜಕೀಯ ವಿದ್ಯಮಾನಗಳು ಗರಿಗೆದರಲಿವೆ.
ಇದಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಅವರಿಗೆ ಪ್ರಧಾನಿ ಅವರು ಕೆಲವು ಸಲಹೆಗಳನ್ನು ನೀಡಲು ದೆಹಲಿಗೆ ಕರೆಸಿಕೊಂಡರೆಂದು ಉನ್ನತ ಮೂಲಗಳು ತಿಳಿಸಿವೆ.
ಕಾನೂನಿನ ಕುಣಿಕೆ
ಈ ಮಧ್ಯೆ, ರಾಜ್ಯ ವಿಧಾನಮಂಡಲದ ಅಧಿವೇಶನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಗೊಳ್ಳಲಿದ್ದು, ಬಿಡಿ ನಿವೇಶನ ಹಂಚಿಕೆ ಹಾಗೂ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಈಗಾಗಲೇ ಶೇಕಡ 70ರಷ್ಟು ತನಿಖೆ ಪೂರ್ಣಗೊಳಿಸಿದೆ.
ಮುಖ್ಯಮಂತ್ರಿ ಅವರ ಕುಟುಂಬ ಹಾಗೂ ನಗರಾಭಿವೃದ್ಧಿ ಸಚಿವರನ್ನು ಹೊರತುಪಡಿಸಿ ಅಧಿಕಾರಿಗಳು ಹಾಗೂ ಅಕ್ರಮದಲ್ಲಿ ಭಾಗಿಯಾದ ಆರೋಪಿಗಳ ವಿಚಾರಣೆಯನ್ನು ಇ.ಡಿ. ಮುಗಿಸಿದೆ.
ಅಂತಿಮ ಘಟ್ಟದಲ್ಲಿ ಪ್ರಮುಖರಿಗೆ ಇ.ಡಿ. ನೋಟಿಸ್ ನೀಡುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಆಂತರಿಕ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ಸತೀಶ್ ಜಾರಕಿಹೊಳಿ ಗುಂಪು
ಈಗಾಗಲೇ ಸಿದ್ದರಾಮಯ್ಯ ಆಪ್ತರಾಗಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದೂರ ಸರಿದು ತಮ್ಮದೇ ಗುಂಪು ಕಟ್ಟುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಕ್ರಮ ಕುರಿತು ಅವರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.
ಎಐಸಿಸಿ ವರಿಷ್ಠರು ಬೆಳಗಾವಿ ಕಾರ್ಯಕ್ರಮ ಕುರಿತು ಪರಿಶೀಲಿಸಿಲು ಭೇಟಿ ನೀಡಿದ ಸಂದರ್ಭದಲ್ಲೂ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ವರಿಷ್ಠರಿಂದ ಸೂಕ್ಷ್ಮ ಅವಲೋಕನ
ಇಂತಹ ಬೆಳವಣಿಗೆ ಮತ್ತು ಇ.ಡಿ. ಕಾನೂನು ಕುಣಿಕೆ ಬಲಗೊಳ್ಳುತ್ತಿರುವುದು ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದ್ದು, ಈ ಎಲ್ಲಾ ಬೆಳವಣಿಗೆಗಳನ್ನು ಬಿಜೆಪಿ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಪ್ರಧಾನಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕರ್ನಾಟಕದಲ್ಲಿ ಪಕ್ಷ ಬಲವರ್ಧನೆಗೆ ದೊರೆತ ಪ್ರೇರಣೆಯಾಗಿದ್ದು, ರಾಜ್ಯಾಧ್ಯಕ್ಷ ಸ್ಥಾನ ಜವಾಬ್ದಾರಿ ವಹಿಸಿಕೊಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿ ಮಾಡಿ ಆಶೀರ್ವಾದ ಪಡೆದುದಾಗಿ ತಿಳಿಸಿದ್ದಾರೆ.
ವಿಕಸಿತ ಭಾರತ ನಿರ್ಮಾಣದ ಮಹಾಸಂಕಲ್ಪ ತೊಟ್ಟ ಪ್ರಧಾನಿ ಮೋದಿ ಅವರ ಕಾರ್ಯಶೈಲಿ ನಮ್ಮಂಥ ಕಾರ್ಯಕರ್ತರಿಗೆ ನಿತ್ಯ ಚೈತನ್ಯದ ಚಿಲುಮೆಯಾಗಿದೆ.
ಯುವಜನರ ಸಹಭಾಗಿತ್ವ
ಸಂಘಟನೆ ಬಲವೃದ್ಧಿ ಜೊತೆಗೇ ರಾಷ್ಟ್ರ ಬಲಿಷ್ಠಗೊಳಿಸುವ ಮಹಾಕಾರ್ಯದಲ್ಲಿ ಯುವಜನರ ಸಹಭಾಗಿತ್ವ ನಿರೀಕ್ಷೆ ಮೀರಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಪ್ರೇರಣೆ ನೀಡಿದೆ.
ಭಾರತದ ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರಗಳ ಪ್ರಗತಿ ಜಾಗತಿಕ ಮಟ್ಟದಲ್ಲಿ ಅಗ್ರ ಸಾಧನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಕರ್ನಾಟಕದ ಕೊಡುಗೆ ಮುಂಚೂಣಿಯಲ್ಲಿರುವಂತೆ ಕಾಳಜಿ ವಹಿಸಲು ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತಾಗಬೇಕು, ಪಕ್ಷದ ಕಾರ್ಯಕರ್ತರು ಯೋಜಿತವಾಗಿ ತೊಡಗಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲು ಪ್ರಧಾನಿ ಸೂಚಿಸಿದರು ಎಂದರು.