ಬೆಂಗಳೂರು:ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ತಾವು ಬಳಸಿರುವ ಪದದ ಬಗ್ಗೆ ಸದನದ ಆಡಿಯೊ, ವಿಡಿಯೊ ಪರಿಶೀಲಿಸಿ, ನನ್ನ ತಪ್ಪಿದ್ದರೆ ನನಗೆ ಶಿಕ್ಷೆ, ಇಲ್ಲವೇ ಅವರ ತಪ್ಪಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ ಇಂದಿಲ್ಲಿ ಆಗ್ರಹಿಸಿದ್ದಾರೆ.
ನನ್ನ ಬಂಧನದ ನಂತರ ರಾತ್ರಿ ಇಡೀ ನಡೆದ ಘಟನಾವಳಿಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಒಳಗೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಸಭಾಪತಿ ಅವರ ಅನುಮತಿ ಇಲ್ಲದೆ, ಪ್ರಕರಣ ದಾಖಲಿಸಿರುವುದು ಮತ್ತು ಬಂಧಿಸಿರುವುದು ಅಪರಾಧ.
ಕಾಲ್ ಡೀಟೇಲ್ ತನಿಖೆ ಆಗಲಿ
ನನ್ನ ಬಂಧನದ ನಂತರ ಇಡೀ ರಾತ್ರಿ ಮೂರು ಜಿಲ್ಲೆಗಳಲ್ಲಿ ವಾಹನದಲ್ಲೇ ಸುತ್ತಾಡಿಸಿದ್ದಾರೆ, ಜೊತೆಯಲ್ಲಿದ್ದ ಪೋಲಿಸರಿಗೆ ಬಂದ ಕರೆಗಳು ಮತ್ತು ನನ್ನ ಫೋನಿನ ಕಾಲ್ ಡೀಟೇಲ್‌ಗಳ ತನಿಖೆ ಆಗಲಿ.
ನನ್ನ ಹತ್ಯೆ ಮಾಡಲು ದೊಡ್ಡ ಸಂಚು ನಡೆದಿತ್ತು, ಇದಕ್ಕಾಗಿ ಪೋಲಿಸರು ರಾತ್ರಿ ನಿಗೂಢ ಸ್ಥಳಗಳಿಗೆ ಕೊಂಡೊಯ್ದಿದ್ದರು.
ಆ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು, ಸಮಗ್ರ ತನಿಖೆ ನಡೆಸಬೇಕು, ಅಲ್ಲದೆ, ನನ್ನ ಬಂಧನ ಸಮಯದಲ್ಲಿ ಪೋಲಿಸರ ಮೇಲೆ ಪ್ರಭಾವ ಬೀರುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಮಕೈಗೊಳ್ಳಿ.
ಪರಮೇಶ್ವರ್ ಹಿಡಿತದಲ್ಲಿ ಗೃಹ ಇಲಾಖೆ ಇಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಿಡಿತದಲ್ಲಿ ಗೃಹ ಇಲಾಖೆ ಇದ್ದಂತೆ ಕಾಣದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕ್ಷೇತ್ರದಿಂದ ನಾನು ಬದುಕು ಬಂದಿದ್ದೇ ಹೆಚ್ಚು ಎಂಬುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಆಡಳಿತ ನಡೆಸುವವರೆ, ಇಂತಹ ಹೇಳಿಕೆ ನೀಡಿದರೆ, ವ್ಯವಸ್ಥೆ ಯಾವ ಮಟ್ಟದಲ್ಲಿದೆ ಎಂಬುದು ತಿಳಿಯುತ್ತದೆ.
ಬೆಳಗಾವಿ-ಕನಕಪುರ ರಿಪಬ್ಲಿಕ್
ಇಂತಹ ಹೇಳಿಕೆ ನೋಡಿದರೆ, ಬೆಳಗಾವಿ ಮತ್ತು ಕನಕಪುರ ಕೆಲವು ವ್ಯಕ್ತಿಗಳ ರಿಪಬ್ಲಿಕ್‌ಗಳಾಗಿವೆಯೇ ಎಂದು ಪ್ರಶ್ನಿಸಿದರು.
ನನ್ನ ರಕ್ಷಣೆ ಜವಾಬ್ದಾರಿ ಸರ್ಕಾರದ್ದು, ಅವರೇ ಈ ರೀತಿ ಹೇಳಿಕೆ ನೀಡಿದರೆ, ಇನ್ನು ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದನ್ನು ಊಹಿಸಬಹುದು ಎಂದರು.