ಬೆಳಗಾವಿ:ತಮ್ಮ ವಿರುದ್ಧ ಅವಾಚ್ಯ ಪದ ಬಳಸಿದ ಬಿಜೆಪಿ ಶಾಸಕ ಸಿ.ಟಿ.ರವಿ ಅವರನ್ನು ಕ್ಷಮಿಸುವ ಮಾತೇ ಇಲ್ಲ ಎಂದಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅವರಿಗೆ ಶಿಕ್ಷೆ ಆಗುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಶಪಥ ತೊಟ್ಟಿದ್ದಾರೆ.
ವಿಧಾನ ಪರಿಷತ್‌ನಲ್ಲಿ ತಮ್ಮ ವಿರುದ್ಧ ಬಳಸಿದ ಅವಾಚ್ಯ ಪದದ ದಾಖಲೆಗಳನ್ನು ಸುದ್ದಿಗಾರರ ಮುಂದೆ ಬಹಿರಂಗಪಡಿಸಿದ ಅವರು, ಈತನ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಭಾಪತಿ ಹಾಗೂ ಮುಖ್ಯಮಂತ್ರಿ ಅವರಿಗೆ ಮತ್ತೆ ಮನವಿ ಮಾಡುವುದಾಗಿ ತಿಳಿಸಿದರು.
ತ್ವರಿತ ತನಿಖೆ ನಡೆಸಬೇಕು
ಪೋಲಿಸರು ತ್ವರಿತವಾಗಿ ತನಿಖೆ ನಡೆಸಬೇಕು, ಎಫ್‌ಎಸ್‌ಎಲ್ ವರದಿ ಬಹಿರಂಗಗೊಳ್ಳಬೇಕು ಎಂದು ಒತ್ತಾಯಿಸಿದರು.
ರವಿ ಅವರ ಗೋಮುಖ ವ್ಯಾಘ್ರದ ಮುಖವಾಡ ಕಳಚಿ ಬೀಳುವವರೆಗೂ ನಾನು ವಿಶ್ರಮಿಸುವುದಿಲ್ಲ.
ಕಳೆದ 28 ವರ್ಷಗಳಿಂದ ಹೋರಾಟ ಮಾಡಿಕೊಂಡು ಈ ಸ್ಥಾನಕ್ಕೆ ಬಂದಿದ್ದೇನೆ, ಇಂತಹ ನೂರು ಸಿ.ಟಿ.ರವಿ ಬಂದರೂ ಎದುರಿಸುತ್ತೇನೆ.
ವೈಭವೀಕರಣ ಮಾಡಿಕೊಳ್ಳುತ್ತಿದ್ದಾರೆ
ಅವಾಚ್ಯ ಶಬ್ದ ಬಳಸಿದ್ದು ಅವರು, ಅನ್ನಿಸಿಕೊಂಡಿದ್ದು ನಾನು, ಇಡೀ ರಾಜ್ಯಾದ್ಯಂತ ಹಾರ-ತುರಾಯಿ ಹಾಕಿಸಿಕೊಂಡು ವೈಭವೀಕರಣ ಮಾಡಿಕೊಳ್ಳುತ್ತಿದ್ದಾರೆ.
ತಲೆಗೆ ಎಷ್ಟು ಪೆಟ್ಟು ಬಿದ್ದಿದೆ, ಎಷ್ಟು ಹೊಲಿಗೆ ಹಾಕಿಸಿಕೊಂಡಿದ್ದಾರೆ, ತಲೆಗೆ ದೊಡ್ಡ ಪಟ್ಟಿ ಕಟ್ಟಿಕೊಂಡು ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ, ಈತ ಮಾಡಿದ ಅಸಹ್ಯ ಕೆಲಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಅಶೋಕ್, ನಮ್ಮ ಸಮಾಜದ ಮುಖಂಡ ಯತ್ನಾಳ್, ಆತನ ಬೆಂಬಲಕ್ಕೆ ನಿಂತಿದ್ದಾರೆ ಎಂದು ಟೀಕಿಸಿದರು.
ಪೋಲಿಸರು ಎನ್‌ಕೌಂಟರ್ ಮಾಡುತ್ತಿದ್ದರು ಎನ್ನುತ್ತಾರಲ್ಲಾ, ನಾಚಿಕೆ ಆಗಲ್ಲವೆ ನಿಮಗೆ, ಇಡೀ ಕರ್ನಾಟಕದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ, ಕಾನೂನು ಪ್ರಕಾರ ಪೋಲಿಸರು ಏನು ಮಾಡಬೇಕೋ ಅದನ್ನು ಮಾಡಿದ್ದಾರೆ.
ಪ್ರಕರಣ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ, ನಾನು ಈ ಘಟನೆ ಬಗ್ಗೆ ಪ್ರಧಾನಿ ಹಾಗೂ ರಾಷ್ಟ್ರಪತಿ ಅವರಿಗೂ ಪತ್ರ ಬರೆಯುವುದಾಗಿ ಹೆಬ್ಬಾಳ್ಕರ್ ತಿಳಿಸಿದರು.