ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ 9,000 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಾಲ್ಕು ನಿಗಮಗಳಲ್ಲೂ ಪಾರದರ್ಶಕವಾಗಿ ಪ್ರತ್ಯೇಕ ನೇರ ನೇಮಕಾತಿ ನಡೆಯಲಿದೆ.
ನಗರದಲ್ಲಿ ಸಾರಿಗೆ ನಿಗಮದ 20 ಹೊಸ ಅಂಬಾರಿ ಉತ್ಸವ್ ಸ್ಲೀಪರ್ ಬಸ್‌ಗಳ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಹೊಸ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿರುವುದಲ್ಲದೆ, ನಿಗಮದ ಮಾರ್ಗಸೂಚಿಯಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಮೊದಲ ಹಂತದ ಭರ್ತಿ
ಈಗಾಗಲೇ ಕೆಲವೆಡೆ ಚಾಲಕರು ಮತ್ತು ನಿರ್ವಾಹಕರನ್ನು ಮೊದಲ ಹಂತದಲ್ಲಿ ಭರ್ತಿ ಮಾಡುವ ಕೆಲಸ ಆರಂಭಗೊಂಡಿದೆ.
ನಿಗಮಕ್ಕೆ 3,000ಕ್ಕೂ ಹೆಚ್ಚು ವಿವಿಧ ಮಾದರಿ ಬಸ್‌ಗಳು ಸೇರ್ಪಡೆಯಾಗಲಿದ್ದು, ಅದಕ್ಕೆ ತಕ್ಕಂತೆ ನೌಕರರ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಿದ್ದೇವೆ ಎಂದರು.
ಕಳೆದ ಕೆಲವು ದಿನಗಳ ಹಿಂದೆ ನಿಗಮಕ್ಕೆ 20 ವೊಲ್ವೊ ಬಸ್‌ಗಳು ಸೇರ್ಪಡೆಗೊಂಡವು, ಇದೀಗ ಅದೇ ಪ್ರಮಾಣದಲ್ಲಿ ಅಂಬಾರಿ ಉತ್ಸವ್ ಸ್ಲೀಪರ್ ಬಸ್‌ಗಳೂ ಸೇರ್ಪಡೆಗೊಳ್ಳುತ್ತಿವೆ.
ಅಂಬಾರಿ ಉತ್ಸವ್ ಸ್ಲೀಪರ್
ಅಂಬಾರಿ ಉತ್ಸವ್ ಸ್ಲೀಪರ್ ಬಸ್ 40 ಬರ್ಥ್‌ಗಳನ್ನು ಒಳಗೊಂಡಿರುತ್ತದೆ, ಇದು ವಾಯುಗತಿ ಶಾಸ್ತ್ರ ವಿನ್ಯಾಸ ಹಾಗೂ ಉತ್ತಮ ಇಂಧನ ದಕ್ಷತೆ ಹೊಂದಿರುತ್ತವೆ.
ವಿದ್ಯುತ್ ಚಾಲಿತ 750 ಬಸ್‌ಗಳ ಖರೀದಿಗೆ ಸಂಪುಟ ಒಪ್ಪಿಗೆ ನೀಡಿದ್ದು, ಅವೂ ಸೇರಲಿವೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಬಸ್‌ಗಳನ್ನು ನಗರ ಪ್ರದೇಶಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.
ಹೊಸದಾಗಿ ಬರುತ್ತಿರುವ ಬಸ್‌ಗಳನ್ನು ಮೈಸೂರು, ದಾವಣಗೆರೆ, ಶಿವಮೊಗ್ಗ ಅಲ್ಲದೆ, ಜಿಲ್ಲಾ ಕೇಂದ್ರಗಳ ನಡುವೆಯೂ ಸಂಚಾರಕ್ಕೆ ಬಿಡಲಾಗುವುದು ಎಂದರು.