ಬೆಳಗಾವಿ:ಲೋಕಸಭಾ ಚುನಾವಣೆ ನಂತರ ವಿವಿಧ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡು ಸಂಕಷ್ಟದಲ್ಲಿರುವ ಪಕ್ಷಕ್ಕೆ ಬಲ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಳೆಯಿಂದ (ಗುರುವಾರ) ಬೆಳಗಾವಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡಿದೆ.
ಪಕ್ಷ ಸಂಕಷ್ಟದಲ್ಲಿದ್ದ ಸಮಯದಲ್ಲೆಲ್ಲಾ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಹಾಗೂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ಗೆ ಮರು ಜೀವ ನೀಡಿದ್ದಾರೆ.
ಜೀವ ತುಂಬುವ ಸಮಾವೇಶ
ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನಾಳೆ 100 ವರ್ಷ ತುಂಬಲಿದೆ, ಇದನ್ನೇ ಮುಂದಿಟ್ಟುಕೊಂಡು ಇಲ್ಲಿನ ಸರ್ಕಾರ ಪಕ್ಷಕ್ಕೆ ಜೀವ ತುಂಬುವಲ್ಲಿ ಸಮಾವೇಶ ಹಮ್ಮಿಕೊಂಡಿದೆ.
ಎಐಸಿಸಿ ಮಹಾಧಿವೇಶನವು ಡಿಸೆಂಬರ್ 27ರಂದು ನಡೆಯಲಿದ್ದು, ಆ ನಂತರ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಪಕ್ಷದ ಧುರೀಣರು ಮಾತನಾಡಲಿದ್ದಾರೆ.
ಸಮಾವೇಶಕ್ಕೆ ಕುಂದಾನಗರಿ ಶಿಂಗರಿಸಿಕೊಂಡು ಸಿದ್ಧಗೊಂಡಿದೆ, ಇದಕ್ಕಾಗಿ ರಾಜ್ಯ ಸರ್ಕಾರ ಮತ್ತು ಪಕ್ಷ ಒಟ್ಟಾರೆ 20 ಕೋಟಿ ರೂ. ವೆಚ್ಚ ಮಾಡುತ್ತಿದೆ.
2 ವಿಶೇಷ ವಿಮಾನ
ಸಮಾವೇಶದಲ್ಲಿ ಭಾಗವಹಿಸಲೆಂದೇ ದೆಹಲಿಯಿಂದ ಅತಿಥಿಗಣ್ಯರನ್ನು ಬೆಳಗಾವಿಗೆ ಕರೆತರಲು 2 ವಿಶೇಷ ವಿಮಾನಗಳಲ್ಲಿ ಸಿದ್ಧಗೊಳಿಸಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಅಧಿನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ದಿಗ್ಗಜ ನಾಯಕರು ಸಮಾವೇಶಕ್ಕೆ ಆಗಮಿಸಲಿದ್ದಾರೆ.
ಐತಿಹಾಸಿಕ ಸಮಾವೇಶದಲ್ಲಿ ಮಹತ್ವದ ಸಂದೇಶ ನೀಡುವ ನಿರ್ಣಯಗಳನ್ನು ಪಕ್ಷದ ವರಿಷ್ಠರು ತೆಗೆದುಕೊಳ್ಳಲಿದ್ದಾರೆ, ಇದಕ್ಕಾಗಿಯೇ ಸಿಡಬ್ಲ್ಯೂಸಿಯ ವಿಶೇಷ ಸಭೆಯೂ ನಡೆಯುತ್ತಿದೆ.
ಸ್ವಾತಂತ್ರ್ಯ ಹೋರಾಟದ ಉತ್ತುಂಗ
ಸ್ವಾತಂತ್ರ್ಯ ಹೋರಾಟದ ಉತ್ತುಂಗದಲ್ಲಿದ್ದಾಗ 1924ರಲ್ಲಿ ಮಹಾತ್ಮ ಗಾಂಧೀಜಿ ಇದೇ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಈ ಐತಿಹಾಸಿಕ ಅಧಿವೇಶನಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದನ್ನು ಮತ್ತೊಂದು ಐತಿಹಾಸಿಕ ಘಟನೆಯನ್ನಾಗಿಸಲು ಎಲ್ಲಾ ಸಿದ್ಧತೆ ನಡೆಸಿದೆ.
ಸಮಾವೇಶವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಕೆಲವು ನಿರ್ಣಯ ಕೈಗೊಳ್ಳುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಸಜ್ಜುಗೊಂಡಿದೆ.
ವರಿಷ್ಠರ ಮನವೊಲಿಕೆ
ದೆಹಲಿ ಇಲ್ಲವೇ ಉತ್ತರ ಭಾರತದ ಯಾವುದಾದರೂ ರಾಜ್ಯದಲ್ಲಿ ಎಐಸಿಸಿ ಮಹಾಧಿವೇಶನ ನಡೆಸಲು ಪಕ್ಷ ತೀರ್ಮಾನ ಕೈಗೊಂಡಿತ್ತು, ಆದರೆ, ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬೆಳಗಾವಿ ಅಧಿವೇಶನಕ್ಕೆ 100 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೇ ಮಾಡೋಣ ಎಂದು ವರಿಷ್ಠರ ಮನವೊಲಿಸಿದ ಫಲವಾಗಿ ಸಮಾವೇಶ ಆಯೋಜನೆಗೊಂಡಿದೆ.
ಕಳೆದ ಎರಡು ತಿಂಗಳಿಂದ ಸಿದ್ಧತೆ ಹೊಣೆಹೊತ್ತು, ಮುಖ್ಯಮಂತ್ರಿ ಸೇರಿದಂತೆ ಸಂಪುಟದ ಎಲ್ಲಾ ಸದಸ್ಯರನ್ನು ಕಾರ್ಯಕ್ರಮ ಯಶಸ್ವಿಗಾಗಿ ತೊಡಗಿಸಿಕೊಂಡಿದ್ದಾರೆ, ಅಲ್ಲದೆ, ಪ್ರತಿಯೊಬ್ಬ ಮಂತ್ರಿಗೂ ನಿರ್ದಿಷ್ಟ ಉಸ್ತುವಾರಿ ವಹಿಸಿ ಜವಾಬ್ದಾರಿ ನೀಡಿದ್ದಾರೆ.