ಆಡಳಿತ ಪಕ್ಷದ ಶಾಸಕರಿಂದಲೇ ಸರ್ಕಾರಕ್ಕೆ ಛೀಮಾರಿ
ಬೆಂಗಳೂರು:‘ಆಲ್ ಈಸ್ ವೆಲ್’ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಬಿಗಿಯುತ್ತಾರೆ, ಸತ್ಯ ಸಂಗತಿಯೆಂದರೆ ಗ್ಯಾರಂಟಿಗಳ ಅನುಷ್ಠಾನಕ್ಕೂ ಹಣಕಾಸಿನ ಕೊರತೆ ಎದ್ದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ, ಆಡಳಿತ ಪಕ್ಷದ ಶಾಸಕ ರಾಜು ಕಾಗೆ ತಮ್ಮದೇ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ.
ಪರಿಹಾರಕ್ಕೂ ಹಣ ಇಲ್ಲ
ಬೆಳಗಾವಿ ಘಟನೆ ನೋಡಿದ್ದೀರಿ, ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ಸಂಭವಿಸುತ್ತಿದೆ, ತೊಗರಿ ಬೆಳೆದ ರೈತರು ಕಂಗಾಲಾಗಿದ್ದಾರೆ, ಸರ್ಕಾರ ಬೆಳೆ ಹಾನಿ ಪರಿಶೀಲನೆಗೆ ಸಿದ್ಧವಿಲ್ಲ, ಪರಿಹಾರ ಕೊಡಲೂ ಹಣ ಇಲ್ಲ.
ರಾಜ್ಯದ ಹಣಕಾಸಿನ ದುಸ್ಥಿತಿ ಒಂದೆಡೆಯಾದರೆ, ನೆರೆಯ ತೆಲಂಗಾಣ ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರದ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ, ಅಲ್ಲಿನ ಮುಖ್ಯಮಂತ್ರಿ, ಗ್ಯಾರಂಟಿ ಈಡೇರಿಸಲು ಅಸಾಧ್ಯ ಎಂಬ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ ಹಾಗೂ ಸುಶಾಸನ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸುಭದ್ರವಾಗಿ ಬೆಳೆದು ನಿಲ್ಲಲು ಲಕ್ಷಾಂತರ ಕಾರ್ಯಕರ್ತರ ಹಾಗೂ ನಾಯಕರ ಅವಿರತ ಶ್ರಮ ಕಾರಣ ಎಂದರು.
ಬಿಜೆಪಿ ಬೆಳೆದು ನಿಂತಿದೆ
ಬಿಜೆಪಿ ಕಾರ್ಯಾಲಯ ಕಟ್ಟಡ ಕಾಣುತ್ತಿದೆ, ಪಕ್ಷ ಬೆಳೆದು ನಿಂತಿರುವುದು ಗೋಚರಿಸುತ್ತಿದೆ, ಆದರೆ, ಅದಕ್ಕೆ ಹಾಕಿದ ಅಡಿಪಾಯದ ಶ್ರಮ ಕಣ್ಣಿಗೆ ಕಾಣಿಸದು.
ಅಟಲ್, ಅಡ್ವಾಣಿ, ಮೋದಿ, ಅಮಿತ್ ಷಾ, ನಡ್ಡಾ ಅವರ ಶ್ರಮವನ್ನು ನೆನಪಿಸಿಕೊಳ್ಳಬೇಕು, ಬೂತ್‌ಮಟ್ಟದ ಕಾರ್ಯಕರ್ತರೂ ದೇಶ ಮುನ್ನಡೆಸುವ ಪ್ರಧಾನಿ ಸ್ಥಾನಕ್ಕೆ ಬೆಳೆದು ನಿಲ್ಲುವ ಅವಕಾಶ ಬಿಜೆಪಿಯಲ್ಲಿ ಮಾತ್ರ ಸಾಧ್ಯ.
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ದೇಶ ಮತ್ತು ರಾಜ್ಯದ ಎಲ್ಲ ಬೂತ್‌ಮಟ್ಟದಲ್ಲೂ ಆಚರಿಸಲಾಗುತ್ತಿದೆ.
ವಾಜಪೇಯಿ ಮಾರ್ಗದರ್ಶನ
ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ವಿರೋಧಪಕ್ಷದ ನಾಯಕರಾಗಿದ್ದರು, ಆಗ ಅವರ ನಿವಾಸಕ್ಕೆ ವಾಜಪೇಯಿ ಹಲವು ಬಾರಿ ಆಗಮಿಸಿದ್ದರು, ಶಾಸಕರಿಗೆ ಮಾರ್ಗದರ್ಶನ ನೀಡುತ್ತಿದ್ದರು, ಶಿಕಾರಿಪುರಕ್ಕೂ ಭೇಟಿ ನೀಡಿದ್ದರು ಎಂದು ಸ್ಮರಿಸಿದರು.
ಜೆ.ಎಚ್.ಪಟೇಲ್ ಸರ್ಕಾರದ ವಿರುದ್ಧ 1999 ರಲ್ಲಿ ಯಡಿಯೂರಪ್ಪ, ಅನಂತಕುಮಾರ್, ರಾಮಚಂದ್ರಗೌಡ, ಶಂಕರಮೂರ್ತಿ ಮೊದಲಾದವರ ನೇತೃತ್ವದಲ್ಲಿ ಜನಾಂದೋಲನ ನಡೆದಿತ್ತು, ಹುಬ್ಬಳ್ಳಿ ಸಮಾವೇಶದಲ್ಲಿ ಒಂದೂವರೆ ಲಕ್ಷದಿಂದ 2 ಲಕ್ಷದಷ್ಟು ಜನಸ್ತೋಮ ಸೇರಿತ್ತು.
ದೊಡ್ಡ ಸಮಾವೇಶ ಉದ್ದೇಶಿಸಿ ವಾಜಪೇಯಿ ಭಾಷಣ ಮುಗಿಸಿ ಹೆಲಿಕಾಪ್ಟರ್ ಏರುವ ಮುನ್ನ ಯಡಿಯೂರಪ್ಪ ಅವರನ್ನು ಬಾಚಿ ಅಪ್ಪಿಕೊಂಡಿದ್ದರು, ವಾಜಪೇಯಿ ಅವರೆಂದರೆ ಒಂದು ರೀತಿ ರೋಮಾಂಚನ.
ಶ್ರೇಷ್ಠ ನಾಯಕ
ವಾಜಪೇಯಿ ಅವರ ಜೊತೆಗಿದ್ದು ಪಕ್ಷ ಸಂಘಟನೆ ಮಾಡಿದ ಅನೇಕ ಹಿರಿಯರು ಇಂದು ವೇದಿಕೆ ಮೇಲಿದ್ದಾರೆ, ವಾಜಪೇಯಿ ಒಬ್ಬ ಶ್ರೇಷ್ಠ ನಾಯಕ ಎಂದು ಗುಣಗಾನ ಮಾಡಿದರು.
ನಮ್ಮ ವೈಯಕ್ತಿಕ ಸಮಸ್ಯೆ, ವ್ಯತ್ಯಾಸಗಳನ್ನು ಬದಿಗಿಟ್ಟು ರಾಜ್ಯ, ಪಕ್ಷ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯ ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದರು.