ಮಂತ್ರಿಗಳಿಗೆ ಎಷ್ಟು ಹಣ ಕೊಡಬೇಕು ಎಂಬುದನ್ನು ಮೇಲ್ಭಾಗದಲ್ಲೇ ಪ್ರಕಟಿಸಿ
ದೊಡ್ಡಬಳ್ಳಾಪುರ:ಗ್ರಾಮೀಣ ಜನರು ಕೆಲಸಗಳಿಗಾಗಿ ಕಚೇರಿಗಳಿಗೆ ದಿನನಿತ್ಯ ಅಲೆಯುವುದನ್ನು ತಪ್ಪಿಸಲು ಯಾರ‍್ಯಾರಿಗೆ ಎಷ್ಟು ಲಂಚ ಎಂಬ ಪಟ್ಟಿ ಪ್ರಕಟಿಸಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಇಲಾಖೆಯಡಿ ಬರುವ ಕಚೇರಿಗಳಲ್ಲಿನ ವ್ಯವಸ್ಥೆ ಮತ್ತು ಖಾಲಿ ಕುರ್ಚಿಗಳನ್ನ ನೋಡಿ ಆಡಳಿತವೇ ಕುಸಿದಿದೆಯಲ್ಲಾ, ಏನು ಮಾಡಬೇಕೋ ಎಂದು ಹಣೆ ಹಣೆ ಚಚ್ಚಿಕೊಂಡ ಘಟನೆ ನಡೆದಿದೆ.
ಮಂತ್ರಿಗಳಿಗೆ ಎಷ್ಟು ಕೊಡಬೇಕು
ಮಂತ್ರಿಗಳಿಗೆ ಹಣ ಕೊಡಬೇಕು ಎನ್ನುತ್ತೀರಲ್ಲಾ, ಅವರಿಗೆ ಎಷ್ಟು ಕೊಡಬೇಕು ಎಂಬುದನ್ನು ಪಟ್ಟಿಯ ಮೇಲ್ಭಾಗದಲ್ಲೇ ಪ್ರಕಟಿಸಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲೋ ನಿಂತು, ಮೂರನೇ ವ್ಯಕ್ತಿ ಮೂಲಕ ಚೌಕಾಸಿ ಮಾಡಿಸುವ ಬದಲು, ಅಧಿಕೃತವಾಗಿ ನೀವೇ ಪಟ್ಟಿ ಹಾಕಿ ಜನರಿಂದ ವಸೂಲಿ ಮಾಡಿ ಕೆಲಸ ಮಾಡಿಕೊಡಿ ಎಂದರು.
ಸಣ್ಣ ಪುಟ್ಟ ಕೆಲಸಕ್ಕೂ ಹತ್ತಾರು ಬಾರಿ ಅಲೆಸಿ, ಕೊನೆಗೆ ಮಧ್ಯವರ್ತಿಗೆ ಹಣ ನೀಡಿದ ನಂತರ ಅರ್ಜಿಗೆ ಸೀಲು ಬೀಳುತ್ತದೆ, ಇಂತಹ ವ್ಯವಸ್ಥೆ ಏಕೆ, ಹೋಟೆಲ್‌ಗಳಲ್ಲಿ ತಿಂಡಿ ಬೆಲೆ ನಿಗದಿ ಮಾಡಿದಂತೆ, ಯಾವ ಯಾವ ಕೆಲಸಕ್ಕೆ ಎಷ್ಟು ಹಣ ಎಂಬುದನ್ನು ಪ್ರಕಟಿಸಿ ಎಂದಿದ್ದಾರೆ.
ಕಚೇರಿ ಬಾಗಿಲುಗಳೇ ತೆರೆದಿಲ್ಲ
ದಿಢೀರನೆ ಇಂದು ದೊಡ್ಡಬಳ್ಳಾಪುರ ತಹಸೀಲ್ದಾರ್ ಹಾಗೂ ಉಪನೋಂದಣಾಧಿಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ಸಚಿವರಿಗೆ, ಖಾಲಿ ಕುರ್ಚಿಗಳು ಕಂಡುಬಂದರೆ, ಮತ್ತೆ ಕೆಲವು ಅಧಿಕಾರಿಗಳ ಕಚೇರಿ ಬಾಗಿಲುಗಳೇ ತೆರೆದಿರಲಿಲ್ಲ.
ಸರ್ಕಾರ ಕೆಲಸದ ಸಮಯ ಆರಂಭವಾಗಿ 30 ನಿಮಿಷಗಳ ನಂತರವೂ ಇಂತಹ ಪರಿಸ್ಥಿತಿ ಕಂಡು ಸಚಿವರು ಹೌಹಾರಿದರು.
ಸ್ಥಳದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ತಾಲ್ಲೂಕು ಮತ್ತು ಎಸಿ ಕಚೇರಿಯ ಪರಿಸ್ಥಿತಿ ವಿವರಿಸಿ ಕ್ರಮ ಜರುಗಿಸುವಂತೆ ಆದೇಶಿಸಿದರು.
ಸಾರ್ವಜನಿಕರಿಂದ ಅಹವಾಲು
ನಂತರ ಸಚಿವರೇ ಖುದ್ದಾಗಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸತ್ತಿದ್ದಾಗ, ಸಿಬ್ಬಂದಿ ಮತ್ತು ಅಧಿಕಾರಿಗಳು ದಢ ದಢನೇ ಕಚೇರಿಗಳಿಗೆ ಧಾವಿಸಿದರು.
ಅವರೆಲ್ಲರನ್ನೂ ಜನರ ಮುಂದೆಯೇ ನಿಲ್ಲಿಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಸಾರ್ವಜನಿಕರನ್ನು ಯಾವ ರೀತಿ ಅಲೆದಾಡಿಸುತ್ತಿದ್ದೀರಿ ಎನ್ನುವುದಕ್ಕೆ ಈ ಮಂದಿಯೇ ಸಾಕ್ಷಿ.
ಅವರನ್ನು ಅಲೆಸುವ ಬದಲು ಯಾವ ಕೆಲಸಕ್ಕೆ ಎಷ್ಟು ರೇಟು, ಯಾವ ಅಧಿಕಾರಿಯ ಪಾಲೆಷ್ಟು ಎಂಬ ಮಾಹಿತಿಯನ್ನು ಬಹಿರಂಗವಾಗಿ ಪ್ರಕಟಿಸಿ ಎಂದಿದ್ದಲ್ಲದೆ, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಕೆಲಸಕ್ಕೆ ಟೈಮೇ ಇಲ್ಲ
ಸರ್ಕಾರಿ ಕಚೇರಿಗೆ, ಜನರ ಕೆಲಸಕ್ಕೆ ಟೈಮೇ ಇಲ್ಲ, ನೀವು ಬರುವ ಸಮಯವೇ ಸರ್ಕಾರಿ ಕೆಲಸದ ಸಮಯ ಅಲ್ಲವೇ ಎಂದು ಪ್ರಶ್ನಿಸಿದರು.
ನೀವು ಸರ್ಕಾರದ ವ್ಯವಸ್ಥೆಯಲ್ಲಿದ್ದೀರಾ ಅಥವಾ ನಿಮ್ಮ ಸ್ವಂತ ವ್ಯವಸ್ಥೆಯಲ್ಲಿದ್ದೀರಾ, ನೀವು ಹೇಳಿದ್ದಷ್ಟೇ ಸರ್ಕಾರಿ ಕೆಲಸ ಅಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.