ಮೈಸೂರು:ಮಹಾನಗರ ಪಾಲಿಕೆ ಕೆಆರ್‌ಎಸ್ ರಸ್ತೆಗೆ ಮರುನಾಮಕರಣ ಮಾಡಿ ’ಸಿದ್ದರಾಮಯ್ಯ ಆರೋಗ್ಯ’ ಮಾರ್ಗ ಎಂಬುದಾಗಿ ಹೆಸರು ಇಡುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಈ ರಸ್ತೆಗೆ ಸದ್ಯ, ರಾಣಿಯರ (ಪ್ರಿನ್ಸೆಸ್) ಹೆಸರಿದೆ, ಅದನ್ನು ಪಾಲಿಕೆ ಬದಲಾವಣೆ ಮಾಡಿ ಸಿದ್ದರಾಮಯ್ಯ ಹೆಸರನ್ನು ಇಟ್ಟಿದೆ.
ಬಿಜೆಪಿ-ಜೆಡಿಎಸ್ ವಿರೋಧ
ಪಾಲಿಕೆ ನಿರ್ಧಾರವನ್ನು ಬಿಜೆಪಿ ಹಾಗೂ ಜೆಡಿಎಸ್ ವಿರೋಧಿಸಿದ್ದರೆ, ಮಾಜಿ ಸಂಸದ ಹಾಗೂ ಬಿಜೆಪಿ ನಾಯಕ ಪ್ರತಾಪ್ ಸಿಂಹ ಸಮರ್ಥಿಸಿದ್ದಾರೆ.
ರಸ್ತೆ ಮರುನಾಮಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿ ಅವರಿಗೆ ಬೇರೆ ಕೆಲಸವೇ ಇಲ್ಲ, ಅವರಿಗೆ ವಿರೋಧ ಮಾಡುವುದನ್ನು ಬಿಟ್ಟರೆ, ಜನಪರ ಕೆಲಸ ಮಾಡುವ ಅಭ್ಯಾಸವಿಲ್ಲ.
ಅವರ ಪಕ್ಷದ ಮಾಜಿ ಸಂಸದ ಪ್ರತಾಪ್ ಸಿಂಹ ಅವರೇ ನಗರಪಾಲಿಕೆ ನಿರ್ಧಾರವನ್ನು ಸಮರ್ಥಿಸಿದ್ದಾರೆ, ಇದಕ್ಕೆ ನೀವು ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು.
ಜನಾಭಿಪ್ರಾಯದಂತೆ ಬದಲಾವಣೆ
ಪಾಲಿಕೆ ಕಾಲಾನುಕಾಲಕ್ಕೆ ರಸ್ತೆಗಳ ಹೆಸರನ್ನು ಜನಾಭಿಪ್ರಾಯದಂತೆ ಬದಲಾವಣೆ ಮಾಡುತ್ತದೆ, ಆ ವಿಷಯದಲ್ಲಿ ನಾವು ಮೂಗು ತೂರಿಸುವುದಿಲ್ಲ.
ಅವರ ನಿರ್ಧಾರದ ಬಗ್ಗೆ ನನಗೆ ತಿಳಿಯದು, ನಾನು ಅದರಲ್ಲಿ ಹಸ್ತಕ್ಷೇಪವನ್ನೂ ಮಾಡಿಲ್ಲ, ಬಿಜೆಪಿ ಅವರಿಗೆ ವಿರೋಧ ಮಾಡುವುದೊಂದೇ ಅಭ್ಯಾಸ ಎಂದು ಕಿಡಿಕಾರಿದರು.
ಮೈಸೂರು ನಗರದ ಕೆಆರ್‌ಎಸ್ ರಸ್ತೆಯ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಸ್ಥಾನದಿಂದ ಹೊರವರ್ತುಲ ರಸ್ತೆ ಜಂಕ್ಷನ್‌ವರೆಗಿನ ರಸ್ತೆಯನ್ನು ’ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ನಾಮಕರಣ ಮಾಡಲು ಪಾಲಿಕೆ ಮುಂದಾಗಿ, ಸಾರ್ವಜನಿಕರ ಅಭಿಪ್ರಾಯಕ್ಕೆ ಆಹ್ವಾನಿಸಿದೆ.
ಮಹಾರಾಣಿ ರಸ್ತೆ
ಇದರ ಬೆನ್ನಲ್ಲೇ ’ಮಹಾರಾಣಿ ಕೆಂಪ ನಂಜಮ್ಮಣ್ಣಿ ಚೆಲುವಮ್ಮಣ್ಣಿ’ ಅವರ ಹೆಸರಿನಲ್ಲಿರುವ ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಮುಂದಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಪಾಲಿಕೆಯ ಈ ನಿರ್ಧಾರವನ್ನು ರಾಜಮನೆತನದವರೂ ವಿರೋಧಿಸಿದ್ದು, ಹೆಸರು ಬದಲಾವಣೆ ಮಾಡದಂತೆ ಒತ್ತಾಯಿಸಿದ್ದಾರೆ.