ಬೆಂಗಳೂರು:ದೇಶದ ಪ್ರಧಾನಮಂತ್ರಿಯಾಗಿ, ಆರ್ಥಿಕ ತಜ್ಞರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ.ಮನಮೋಹನ್ ಸಿಂಗ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ ಸಂದೇಶದಲ್ಲಿ, ಡಾ.ಮನಮೋಹನ್ ಸಿಂಗ್ ಭಾರತೀಯ ಅರ್ಥ ವ್ಯವಸ್ಥೆ ದಿಕ್ಕನ್ನೇ ಬದಲಿಸಿದ ಧೀಮಂತ ನಾಯಕ, ಸಂಸತ್‌ನಲ್ಲಿ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಏಪ್ರಿಲ್ 3ರಂದು ರಾಜ್ಯಸಭೆಯಿಂದ ನಿವೃತ್ತಿ ಹೊಂದಿದ್ದರು, ಆರ್‌ಬಿಐ ಗವರ್ನರ್, ಅರ್ಥಶಾಸ್ತ್ರಜ್ಞ, ವಿತ್ತ ಸಚಿವ ಮತ್ತು ಪ್ರಧಾನಿಯಾಗಿ ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದ್ದಾರೆ.
ಖಾಸಗೀಕರಣ, ಸರಳೀಕರಣ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಿ ಅಭಿವೃದ್ಧಿಗೆ ನಾಂದಿ ಹಾಡಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಅವರು, ಪಿ.ವಿ.ನರಸಿಂಹ ರಾವ್ ಆಡಳಿತದಲ್ಲಿ ಚಿನ್ನ ಅಡವಿಟ್ಟು ದೇಶ ನಡೆಸುವ ಪರಿಸ್ಥಿತಿ ಇತ್ತು, ಇಂತಹ ಸಂಕಷ್ಟದಲ್ಲಿ ಡಾ.ಸಿಂಗ್ ಅರ್ಥ ಸಚಿವರಾಗಿ ಕೆಲವು ಆರ್ಥಿಕ ನೀತಿಗಳಲ್ಲಿ ಮಾರ್ಪಾಟು ಮಾಡಿ ಸುಧಾರಣೆ ತಂದರು, ಖಾಸಗೀಕರಣ, ಸರಳೀಕರಣ ಹಾಗೂ ವಿದೇಶಿ ವಿನಿಮಯ ಗಳಿಕೆಗೆ ಜಾರಿಗೊಳಿಸಿದ ಮಾರ್ಗಸೂಚಿಗಳು ಭಾರತದ ಅಭಿವೃದ್ಧಿಗೆ ಮುನ್ನಡೆ ಬರೆದವು ಎಂದು ಗುಣಗಾನ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬದುಕು, ಆರ್ಥಿಕ ನೀತಿಗಳು ನಮ್ಮೆಗೆಲ್ಲ ಪ್ರೇರಣೆ, ಶ್ರೇಷ್ಠ ಆರ್ಥಿಕ ತಜ್ಞರಾಗಿ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಉದಾರೀಕರಣ ನೀತಿ ಮೂಲಕ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಅವರ ದೂರದೃಷ್ಟಿ ಯೋಜನೆಗಳು ಭಾರತ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಕಾರಣವಾಯಿತು ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಡಾ.ಮನಮೋಹನ್ ಸಿಂಗ್ ಕರ್ನಾಟಕಕ್ಕೆ ಅದರಲ್ಲೂ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು, ನರ್ಮ್ ಯೋಜನೆ ಮೂಲಕ ಅನೇಕ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಹಕರಿಸಿದ್ದರು, ನಗರದಲ್ಲಿ ಅನೇಕ ಮೇಲ್ಸೇತುವೆಗಳೂ ಅವರ ಕೊಡುಗೆಗಳಾಗಿವೆ, ರೈತರ ಸಾಲಮನ್ನಾ ಮಾಡಿ ಅವರ ಪರವಾಗಿ ದೃಢವಾಗಿ ನಿಂತವರು, ನರೇಗಾ ಮೂಲಕ ಗ್ರಾಮೀಣ ಜನರ ಬದುಕಿನಲ್ಲಿ ಉದ್ಯೋಗ ಗ್ಯಾರಂಟಿ ಸೃಷ್ಟಿ ಮಾಡಿದರು, ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಸೇರಿದಂತೆ ಅನೇಕ ಜನಪರ ಕಾಯ್ದೆಗಳನ್ನು ಜಾರಿಗೆ ತಂದರು ಎಂದರು.
ಸುಧಾರಣೆಗಳ ಹರಿಕಾರ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸಂದೇಶದಲ್ಲಿ, ಆರ್ಥಿಕ ಸಂಕಷ್ಟ ಕಾಲದಲ್ಲಿ ದೇಶವನ್ನು ಮುನ್ನಡೆಸಿದ್ದ ಮೇಧಾವಿ, ಪ್ರಖ್ಯಾತ ವಿತ್ತತಜ್ಞ, ಆರ್ಥಿಕ ಸುಧಾರಣೆಗಳ ಹರಿಕಾರ, ದೂರದೃಷ್ಟಿ, ಸಂಯಮ ಮತ್ತು ಆರ್ಥಿಕ ಮೇದಸ್ಸಿನಿಂದ ರಾಷ್ಟ್ರವನ್ನು ಸಶಕ್ತವಾಗಿ ಮುನ್ನಡೆಸಿದ ಅವರ ಕೊಡುಗೆ ಅಪಾರ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಸಂತಾಪ ಸೂಚಿಸಿ, ಭಾರತೀಯ ಅರ್ಥಶಾಸ್ತ್ರಜ್ಞ, ಹಿರಿಯ ರಾಜಕಾರಣಿ ಡಾ.ಮನಮೋಹನ್ ಸಿಂಗ್ 2004 ರಿಂದ 2014 ರವರೆಗೆ ಪ್ರಧಾನ ಮಂತ್ರಿಯಾಗಿ, 1970ರ ದಶಕದಲ್ಲಿ ಆರ್ಥಿಕ ಸಲಹೆಗಾರರಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಮತ್ತು ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು ಎಂದು ಸ್ಮರಿಸಿದ್ದಾರೆ.
ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಸಚಿವರಾದ ಡಾ.ಜಿ.ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ ಮತ್ತಿತರರು ಕಂಬನಿ ಮಿಡಿದಿದ್ದಾರೆ.