ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಳ ಮಾಡುವಂತೆ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.
ನಿಗಮಗಳು ಕಳೆದ 2020ರಿಂದ ಪ್ರಯಾಣ ದರ ಪರಿಷ್ಕರಣೆ ಮಾಡದೆ, ಭಾರೀ ನಷ್ಟಕ್ಕೆ ಗುರಿಯಾಗಿದೆ.
ವಾರ್ಷಿಕ 3,650 ಕೋಟಿ ರೂ. ನಿಗಮಕ್ಕೆ ಹೊರೆಯಾಗುತ್ತಿದ್ದು, ಪ್ರಯಾಣ ದರ ಪರಿಷ್ಕರಣೆ ನಂತರ ನಷ್ಟದ ಪ್ರಮಾಣ 1,800 ಕೋಟಿ ರೂ.ಗಳಿಗೆ ಇಳಿಯುತ್ತದೆ.
ಪಾರ್ಸೆಲ್ ಸೇವೆ ಅನುಷ್ಟಾನ
ನಿಮಗಕ್ಕೆ ಆಗುತ್ತಿರುವ ನಷ್ಟವನ್ನು ಪ್ರತಿ ಬಾರಿಯೂ ಭರಿಸಲಾಗದು, ಸಂಪನ್ಮೂಲ ಕ್ರೋಡೀಕರಣಕ್ಕೆ ದರ ಹೆಚ್ಚಳ ಜೊತೆಗೆ ಪಾರ್ಸೆಲ್ ಸೇವೆಯನ್ನೂ ಅನುಷ್ಟಾನಗೊಳಿಸಿ, ನಿಗಮದ ಸೇವೆಗಳನ್ನು ಸಾರ್ವಜನಿಕರಿಗೆ ಪರಿಣಾಮಕರಿಯಾಗಿ ತಿಳಿಸಿ, ಸಂಸ್ಥೆಯಲ್ಲಿರುವ 200 ಎಕರೆ ಭೂಮಿಯನ್ನು ಆದಾಯ ಕ್ರೋಡೀಕರಣಕ್ಕಾಗಿ ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದಿದ್ದಾರೆ.
ಶಕ್ತಿ ಯೋಜನೆ ಜಾರಿ ನಂತರ ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆ 80 ಲಕ್ಷದಿಂದ 1.05 ಕೋಟಿಗೆ ಏರಿಕೆಯಾಗಿದೆ.
ಅದರಲ್ಲಿ 26 ಲಕ್ಷ ಮಹಿಳೆಯರು ಸೇರಿದ್ದಾರೆ, ಸರ್ಕಾರ ನೀಡುವ ಸಬ್ಸಿಡಿ ಜೊತೆಗೆ ನಿಗಮಗಳು ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚು ಒತ್ತು ನೀಡದಿದ್ದರೆ ಪ್ರಯಾಣಿಕರಿಗೆ ಮೂಲಸೌಕರ್ಯ ನೀಡಲು ಕಷ್ಟಕರವಾಗುತ್ತದೆ.
ವಿದ್ಯುತ್ ಚಾಲಿತ ಬಸ್
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ವಿದ್ಯುತ್ ಚಾಲಿತ ಬಸ್‌ಗಳನ್ನು ಪಡೆಯಲು ಹೆಚ್ಚು ಆದ್ಯತೆ ಕೊಡಿ.
ವಾಹನಗಳಿಗೆ ಜಿಪಿಎಸ್ ಸಾಧನ ಅಳವಡಿಕೆ ಮತ್ತು ಇ-ಆಡಳಿತಕ್ಕೆ ಹೆಚ್ಚು ಒತ್ತು ಕೊಡುವಂತೆ ತಿಳಿಸಿರುವುದಲ್ಲದೆ, ನಿಗದಿತ ದಿನಗಳೊಳಗೆ ಕಾರ್ಯಕ್ರಮ ರೂಪಿಸಲು ಆದೇಶ ಮಾಡಿದೆ.
ಸಭೆಯಲ್ಲಿ ಮುಖ್ಯಕಾರ್ಯದರ್ಶಿ ಅವರಲ್ಲದೆ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್, ವಿವಿಧ ಸಾರಿಗೆ ನಿಗಮಗಳ ವ್ಯವಸ್ಥಾಪಕರಾದ ವಿ.ಅನ್ಬುಕುಮಾರ್, ಆರ್.ರಾಮಚಂದ್ರನ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ರಾಜ್ಯ ಬಿಜೆಪಿ ಆಕ್ಷೇಪ
ಈ ಮಧ್ಯೆ, ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ, ಸಾರಿಗೆ ಇಲಾಖೆಯನ್ನು ಸಮಾದಿ ಮಾಡುವ ಮಟ್ಟಕ್ಕೆ ಈ ಸರ್ಕಾರ ತಂದು ನಿಲ್ಲಿಸಿದೆ ಎಂದಿದೆ.
ಸಾರಿಗೆ ಇಲಾಖೆ ನೌಕರರು ಡಿಸೆಂಬರ್ 31 ರಿಂದ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದು, ಅವರ ಬೆಂಬಲಕ್ಕೆ ಬಿಜೆಪಿ ನಿಲ್ಲಲಿದೆ.
ಪ್ರಾಮಾಣಿಕ ಅಧಿಕಾರಿಗಳು ಶೇಖರಿಸಿಟ್ಟ ನಿಗಮದ ಆಸ್ತಿಯನ್ನು ಮಾರಾಟ ಮಾಡಲು ಈ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದೆ.
7,401 ಕೋಟಿ ರೂ. ಬಾಕಿ
ಅಧಿಕಾರಿ, ಸಿಬ್ಬಂದಿಗೆ ವೇತನ ನೀಡಲು ಆಸ್ತಿ ಮಾರಾಟಕ್ಕೆ ಮುಂದಾಗಿದೆ, ಶಕ್ತಿ ಯೋಜನೆ ಜಾರಿ ನಂತರ ಸರ್ಕಾರ ಇದುವರೆಗೆ 7,401 ಕೋಟಿ ರೂ. ಕೊಡಬೇಕಿದೆ, ನಿಗಮದ ಮೇಲೆ 5,614 ಕೋಟಿ ರೂ. ಸಾಲದ ಹೊರೆ ಇದೆ.
ಇಂತಹ ಸಂದಿಗ್ಧಸ್ಥಿತಿಯಲ್ಲಿ ಸರ್ಕಾರ ಮಧ್ಯೆ ಪ್ರವೇಶ ಮಾಡಿ ನಿಗಮ ಮತ್ತು ನೌಕರರನ್ನು ಉಳಿಸುವ ಬದಲು ದಿನನಿತ್ಯ ಬಡಾಯಿ ಕೊಚ್ಚಿಕೊಂಡು ತಿರುಗುತ್ತಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.