ಸಚಿನ್ ಪಾಂಚಾಳ್ ಸಾವು: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ
ಬೆಂಗಳೂರು:ಗುತ್ತಿಗೆದಾರ ಸಚಿನ್ ಪಾಂಚಾಳ್ ಸಾವು ಪ್ರಕರಣದ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದು, ಘಟನೆಯನ್ನು ಸಿಬಿಐನಿಂದ ತನಿಖೆ ಮಾಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಕುಟುಂಬದ ಆಪ್ತ ರಾಜು ಕಪನೂರ್ ಟೆಂಡರ್ ಮಾಡಿಕೊಡಲು ಶೇ.5ರಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದು, ಪ್ರಿಯಾಂಕ್ ಖರ್ಗೆ ನಾನು ಹೇಳಿದ ಮಾತನ್ನು ಮೀರುವುದಿಲ್ಲ, ಸಚಿವರ ಬೆಂಬಲ ಇದೆ ಎಂಬುದಾಗಿ ಹೇಳಿದ್ದರೆಂದು ಸಚಿನ್ ತಮ್ಮ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡಲಿ
ಸಿಬಿಐ ತನಿಖೆಗೆ ಸಚಿನ್ ಕುಟುಂಬವೂ ಒತ್ತಾಯಿಸಿದೆ, ಈ ಹಿಂದೆ, ಸಚಿವ ನಾಗೇಂದ್ರ, ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ಕೊಟ್ಟಿದ್ದು, ಒಂದು ಕ್ಷಣವೂ ತಡ ಮಾಡದೆ, ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಪ್ರಿಯಾಂಕ್ ಖರ್ಗೆ ಮರೆಯಬಾರದು, ಮಡಿಕೇರಿಯಲ್ಲಿ ಪೊಲೀಸ್ ಅಧಿಕಾರಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಅಲ್ಲದೆ, ಅಂದಿನ ಗೃಹ ಸಚಿವ ಜಾರ್ಜ್ ಸಹಾ ರಾಜೀನಾಮೆ ನೀಡಿ, ಸಿಬಿಐ ತನಿಖೆ ಎದುರಿಸಿದ್ದರು.
ಸಚಿನ್ ಕುಟುಂಬಕ್ಕೆ ಕೂಡಲೇ ಭದ್ರತೆ ಕೊಡಬೇಕು, ಒಂದು ಕೋಟಿ ರೂ. ಪರಿಹಾರ ನೀಡಬೇಕು, ಕುಟುಂಬದಲ್ಲಿ ಹಲವರು ವಿದ್ಯಾವಂತರಿದ್ದು, ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದರು.
ಕೊಲೆಗೆ ಸಂಚು
ಡೆತ್‌ನೋಟ್‌ನಲ್ಲಿ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಬಸವರಾಜ ಮತ್ತಿಮೂಡ, ಕಲಬುರಗಿಯ ಬಿಜೆಪಿ ನಾಯಕರಾದ ಚಂದುಪಾಟೀಲ್, ಮಣಿಕಂಠ ರಾಠೋಡ್ ಕೊಲೆಗೆ ಸಂಚು ರೂಪಿಸಿದ್ದಾಗಿ ತಿಳಿಸಲಾಗಿದೆ.
ಆದ್ದರಿಂದ, ಇದು ಗಂಭೀರ ವಿಚಾರವಾಗಿದ್ದು, ಸಿಬಿಐ ತನಿಖೆ ಅತ್ಯಗತ್ಯವಾಗಿದೆ, ರಾಜ್ಯ ಪೊಲೀಸ್ ಇಲಾಖೆ, ರಾಜಕೀಯವಾಗಿ ಪ್ರಬಲವಾಗಿರುವ ಖರ್ಗೆ ಕುಟುಂಬದ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲ.
ಆರೋಪ ಎದುರಿಸುತ್ತಿರುವ ಪ್ರಿಯಾಂಕ್ ಖರ್ಗೆ ಹಲವು ಇಲಾಖೆ ಸಚಿವರು, ಬಹಳ ಜ್ಞಾನಿ, ಮೇಧಾವಿ, ಬುದ್ಧಿವಂತರು, ಪ್ರಭಾವಿ, ಶಕ್ತಿಶಾಲಿ ಮುಖಂಡರೂ ಆಗಿದ್ದಾರೆ, ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪಿನಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಪೋಲಿಸ್ ಅಧಿಕಾರಿಗಳ ನಿರ್ಲಕ್ಷ್ಯ
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಚಿನ್ ಪಾಂಚಾಳ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದಾಗ, ಇಬ್ಬರು ಸಹೋದರಿಯರಾದ ಸವಿತಾ, ಸುನೀತಾ ಮಧ್ಯಾಹ್ನ 2-15ಕ್ಕೆ ಪೊಲೀಸ್ ಠಾಣೆಗೆ ಧಾವಿಸಿ, ಅವರ ಪ್ರಾಣ ಉಳಿಸುವಂತೆ ಗೋಗರೆದರೂ ಕಿಂಚಿತ್ತೂ ಲೆಕ್ಕಿಸದೆ, ಪಿಎಸ್‌ಐ ಅಮಾನವೀಯವಾಗಿ ನಡೆದುಕೊಂಡಿದ್ದಾರೆ, ಅಲ್ಲದೆ, ಸಹೋದರಿಯರನ್ನು ಇತರೆ ಪೊಲೀಸ್ ಠಾಣೆಗಳಿಗೆ ತಿರುಗಾಡಿಸಿದ್ದಾರೆ.
ಪೊಲೀಸ್ ಠಾಣೆಗೆ ಹೋಗಿದ್ದ ಹೆಣ್ಮಕ್ಕಳ ಜೊತೆ ಕೆಟ್ಟದಾಗಿ ನಡೆದುಕೊಳ್ಳಲಾಯಿತು, ದೂರು ದಾಖಲಿಸಿಕೊಂಡು ಮೊಬೈಲ್ ಟ್ರ್ಯಾಕ್ ಮಾಡಿದ್ದರೆ ನನ್ನ ತಮ್ಮ ಉಳಿಯುತ್ತಿದ್ದ ಎಂದು ಆ ಸೋದರಿಯರು ತಿಳಿಸಿದ್ದಾರೆ.
ಹೆಣ್ಮಕ್ಕಳಿಗೆ ಹೀಯಾಳಿಸಿ, ಅಪಮಾನ ಮಾಡಿ ನಿಂದಿಸಿದ್ದು ಅಕ್ಷಮ್ಯ ಅಪರಾಧ, ಅಧಿಕಾರಿಗಳ ಕಾಲಹರಣದಿಂದ ಘಟನೆ ಸಂಭವಿಸಿದೆ, ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ, ರಿಪಬ್ಲಿಕ್ ಆಫ್ ಗುಲ್ಬರ್ಗ ಜಿಲ್ಲೆ ಯಾರ ಕಪಿಮುಷ್ಟಿಯಲ್ಲಿದೆ ಎಂಬುದನ್ನು ಅಲ್ಲಿನ ಜನ ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಅನೇಕ ಆತ್ಮಹತ್ಯೆ, ಕೊಲೆ ಪ್ರಕರಣಗಳು ನಡೆದಿವೆ, ಅವುಗಳನ್ನು ಮುಚ್ಚಿಹಾಕಿದ ಷಡ್ಯಂತ್ರವೂ ಹಿಂದೆ ನಡೆದಿದೆ, ಕಾಂಗ್ರೆಸ್ ನಾಯಕರು ಬೆಳಗಿನ ಜಾವ 3 ಗಂಟೆಗೆ ನೊಂದ ಕುಟುಂಬವನ್ನು ಭೇಟಿ ಮಾಡಿ, ಸಮಾಧಾನ ಹೇಳಿ, ಸುಮ್ಮನಾಗುವಂತೆ ಬೆದರಿಕೆ ಹಾಕಿದ್ದಾರೆ, ಜಿಲ್ಲೆಯ ಪೊಲೀಸ್ ಇಲಾಖೆ ಖರ್ಗೆ ಕುಟುಂಬದ ಹಿಡಿತದಲ್ಲಿದೆ ಎಂದು ಆರೋಪಿಸಿದರು.
ಕರ್ನಾಟಕಕ್ಕೆ ಆತ್ಮಹತ್ಯೆ ಭಾಗ್ಯ
ಭ್ರಷ್ಟಾಚಾರ ಹಗರಣ ಹಿನ್ನೆಲೆ ವಾಲ್ಮೀಕಿ ನಿಗಮದ ಅಕೌಂಟೆಂಟ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿ.ಎ. ಹೆಸರು ಬರೆದಿಟ್ಟು ರುದ್ರಣ್ಣ ಯಡವಣ್ಣವರ್ ಆತ್ಮಹತ್ಯೆ ಮಾಡಿಕೊಂಡರು, ದಾವಣಗೆರೆಯಲ್ಲಿ ಗುತ್ತಿಗೆದಾರರೊಬ್ಬರು ಬಾಕಿ ಹಣ ಸಿಗದೆ ಆತ್ಮಹತ್ಯೆ ಮಾಡಿಕೊಂಡರು, ಮಾಗಡಿಯಲ್ಲಿ ಕ್ರಷರ್ ಲಾರಿ ಮಾಲೀಕರೊಬ್ಬರು ಲಂಚ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡರು, ಯಾದಗಿರಿ ಪಿಎಸ್‌ಐ ಪರಶುರಾಮ್, ಸ್ಥಳೀಯ ಶಾಸಕರ ಪುತ್ರನ ಒತ್ತಡ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡರು.
ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ, ಸರ್ಕಾರ, ಸಚಿವರು, ಆಡಳಿತ ಶಾಸಕರ ಕುಮ್ಮಕ್ಕಿನಿಂದ ಸರಣಿ ಆತ್ಮಹತ್ಯೆ ಪ್ರಕರಣಗಳು ಘಟಿಸುತ್ತಿವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕರ್ನಾಟಕಕ್ಕೆ ಆತ್ಮಹತ್ಯೆ ಭಾಗ್ಯ ದಯಪಾಲಿಸಿದೆ ಎಂದು ಆರೋಪಿಸಿದರು.