ಬೆಂಗಳೂರು:ಸಚಿವ ಪ್ರಿಯಾಂಕ್ ಖರ್ಗೆ ಮೇಲೆ ಬಿಜೆಪಿ ಮಾಡಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಮೇಲೆ ಅನವಶ್ಯಕ ಆಪಾದನೆ ಮಾಡುವುದು ಯಾವುದೇ ಸರ್ಕಾರಕ್ಕೆ ಸರಿ ಕಾಣುವುದಿಲ್ಲ, ಡೆತ್‌ನೋಟ್‌ನಲ್ಲಿ ಸಚಿವರ ಹೆಸರು ಸಹಾ ಇಲ್ಲ ಎಂಬುದಾಗಿ ಇಲಾಖಾ ಅಧಿಕಾರಿಗಳು ಹೇಳಿದ್ದಾರೆ, ಸಚಿವರ ಹೆಸರನ್ನು ಎಳೆದು ತಂದು, ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ, ಸತ್ಯಾಸತ್ಯತೆ ಹೊರಬರಲಿ ಎಂಬ ದೃಷ್ಟಿಯಿಂದ ಮುಖ್ಯಮಂತ್ರಿ ಜೊತೆ ಚರ್ಚಿಸಿ ಸಿಐಡಿಗೆ ವಹಿಸಲಾಗಿದೆ ಎಂದರು.
ರಾಜೀನಾಮೆ ಅಗತ್ಯ ಇಲ್ಲ
ತನಿಖಾ ವರದಿ ಬಂದ ನಂತರ ಸತ್ಯ ಏನೆಂಬುದು ತಿಳಿಯುತ್ತದೆ, ಸಚಿವ ಸ್ಥಾನಕ್ಕೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯ ಇಲ್ಲ, ಅನವಶ್ಯಕವಾಗಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.
ಬಿಜೆಪಿ ಒತ್ತಾಯಿಸಿದಂತೆ ಎಲ್ಲಾ ಪ್ರಕರಣಗಳನ್ನೂ ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ, ಸಿಐಡಿ ಸಮರ್ಥವಾಗಿದೆ, ಅನೇಕ ಪ್ರಕರಣಗಳಲ್ಲಿ ತನಿಖಾ ವರದಿ ಬಂದಿಲ್ಲವೇ, ಬಿಜೆಪಿ ಹೇಳಿದ್ದನ್ನೆಲ್ಲಾ ಕೇಳಲು ಸಾದ್ಯವಿಲ್ಲ, ಸಕರಾತ್ಮಕ ಸಲಹೆ, ಸೂಚನೆ ನೀಡಿದರೆ ಕೇಳುತ್ತೇವೆ, ಎಲ್ಲದರಲ್ಲೂ ರಾಜಕೀಯ ಮಾಡಿದರೆ ಕೇಳುವುದಿಲ್ಲ.
ಸತ್ಯಾಸತ್ಯತೆ ಹೊರಬರಲಿ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಶಾಸಕ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ, ಸಿಐಡಿ ತನ್ನ ತನಿಖೆ ಪ್ರಾರಂಭಿಸಿದೆ.
ಸಾರ್ವಜನಿಕರು ಎಚ್ಚರಿಕೆಯಿಂದ ಹೊಸ ವರ್ಷಾಚರಣೆ ಮಾಡಬೇಕು, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕಯಗೊಳ್ಳಲು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸೂಚಿಸಲಾಗಿದೆ, ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ, ಇತರರಿಗೆ ತೊಂದರೆಯಾಗದಂತೆ ಹೊಸ ವರ್ಷ ಆಚರಿಸಿ ಎಂದು ವಿನಂತಿಸಿದರು.