ಬೆಂಗಳೂರು:ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ, ಪ್ರಕರಣದಲ್ಲಿ ಸರ್ಕಾರಕ್ಕೆ ಮುಜುಗರ ಆಗುವುದಾದರೆ ತಾವು ಸಚಿವ ಸ್ಥಾನ ತೊರೆಯುವುದಾಗಿ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಪಷ್ಟಪಡಿಸಿದ್ದಾರೆ.
ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ, ಘಟನೆಗೆ ಸಂಬಂಧಿಸಿದಂತೆ ಸಿಐಡಿ ಇಲ್ಲವೇ ಎಸ್‌ಐಟಿಯಿಂದ ತನಿಖೆ ನಡೆಸಿ ಎಂದು ಕೋರಿದ್ದಾರೆ.
ಡಾ. ಪರಮೇಶ್ವರ್ ಜೊತೆ ಚರ್ಚೆ
ಪ್ರಿಯಾಂಕ್ ಅವರ ಮನವಿ ಮೇರೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಅವರು, ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಸ್ಥಳದಲ್ಲೇ ಆದೇಶಿಸಿದರು.
ತನಿಖೆ ವರದಿ ಬರುವವರೆಗೂ ನಾನು ಸರ್ಕಾರದಿಂದ ಹೊರಗಿರುತ್ತೇನೆ, ಈ ಬಗ್ಗೆ ನೀವೇ ನಿರ್ಧಾರ ಕೈಗೊಳ್ಳಿ ಎಂದಿದ್ದಾರೆ.
ಗುತ್ತಿಗೆದಾರ ಯಾವ ಕಾರಣಕ್ಕೆ ಆತ್ನಹತ್ಯೆಗೆ ಶರಣಾಗಿದ್ದಾರೋ ನನಗೆ ತಿಳಿಯದು, ಆದರೆ, ಅವರ ಡೆತ್‌ನೋಟ್ ಬಗ್ಗೆ ನನಗೆ ಸಂಶಯ ಇದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ತನಿಖೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ.
ರಾಜು ಕಪನೂರ್ ಮೇಲೆ ಆರೋಪ
ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ರಾಜು ಕಪನೂರ್ ಅವರ ಮೇಲೆ ಆತ್ಮಹತ್ಯೆಗೂ ಮುನ್ನ ಗುತ್ತಿಗೆದಾರರು ಆರೋಪ ಮಾಡಿದ್ದಾರೆ.
ಪಕ್ಷದ ಕಾರ್ಯಕರ್ತರ ಜೊತೆ ನಮ್ಮ ಕುಟುಂಬ ಉತ್ತಮ ಬಾಂಧವ್ಯ ಹೊಂದಿದೆ, ಎಲ್ಲರನ್ನೂ ನಾವು ಗೌರವದಿಂದ ನೋಡುತ್ತೇವೆ.
ಸಭೆ, ಸಮಾರಂಭಗಳಲ್ಲಿ, ಪಕ್ಷದ ಕಾರ್ಯಕ್ರಮಗಳಲ್ಲಿ ನಾನು ಮುಖಂಡರ ಜೊತೆ ಭಾಗಿಯಾಗುತ್ತೇನೆ, ಕಪನೂರ್ ಜೊತೆ ಇರುವ ಕೆಲವು ಭಾವಚಿತ್ರಗಳನ್ನು ಬಿಜೆಪಿ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ.
ಸಂಬಂಧ ಕಲ್ಪಿಸುವ ಪಿತೂರಿ
ಬಿಜೆಪಿ ನಡವಳಿಕೆ ಬಗ್ಗೆ ನಾವು ಹಿಂದಿನಿಂದಲೂ ವಿರೋಧಿಸುತ್ತಿರುವುದಕ್ಕೂ, ಈ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧ ಕಲ್ಪಿಸುವ ಪಿತೂರಿ ಪ್ರತಿಪಕ್ಷದಿಂದ ನಡೆದಿದೆ.
ಸಚಿವನಾಗಿ ಇಲಾಖೆ ಮತ್ತು ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದಿರುವುದು ಕೆಲವರಿಗೆ ಮೂಗು ಮುರಿಯುವಂತೆ ಮಾಡಿದೆ.
ಪ್ರಕರಣದಲ್ಲಿ ನನ್ನದಾಗಲಿ, ನನ್ನ ಕುಟುಂಬದ್ದಾಗಲಿ ಯಾವುದೇ ಪಾತ್ರವಿಲ್ಲ, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ನಿಮಗೆ ಮುಕ್ತ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಆರ್ಭಟ
ಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿ ಅವರು, ಯಾರೇ ಆತ್ಮಹತ್ಯೆ ಮಾಡಿಕೊಂಡರೂ, ಆಸ್ಪತ್ರೆಗಳಲ್ಲಿ ಸತ್ತರೂ ಸರ್ಕಾರವೇ ಹೊಣೆ ಎಂದು ಬಿಜೆಪಿ ಆರ್ಭಟಿಸುತ್ತದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಜೊತೆ ಸಮಾಲೋಚಿಸಿ ತನಿಖೆಗೆ ಆದೇಶ ಮಾಡುತ್ತೇನೆ, ಸದಸ್ಯಕ್ಕೆ ನೀವು ರಾಜೀನಾಮೆ ನೀಡುವು ಅಗತ್ಯವಿಲ್ಲ ಎಂದಿದ್ದಾರೆ.