ಬೆಂಗಳೂರು:ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪೋಸ್ಟರ್ ವಾರ್ ಆರಂಭಿಸಿದೆ.
ಪೋಸ್ಟರ್ ಅಂಟಿಸುವ ಅಭಿಯಾನದಲ್ಲಿ ತೊಡಗಿದ್ದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದಾರೆ.
ಸುಪಾರಿ, ಹನಿಟ್ರ್ಯಾಪ್
ಈ ಮಧ್ಯೆ ಪ್ರತೇಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಏಕಾಯಿತು ಎಂಬುದು ತನಿಖೆಯಿಂದ ಹೊರಬರಬೇಕಿದೆ, ಸುಪಾರಿ, ಹನಿಟ್ರ್ಯಾಪ್ ವಿಷಯವೂ ಇದರೊಂದಿಗೆ ಹೆಣೆದುಕೊಂಡಿದ್ದು, ಮಹಾರಾಷ್ಟ್ರದವರ ಹೆಸರುಗಳು ಆರೋಪದಲ್ಲಿ ಕೇಳಿಬಂದಿರುವುದರಿಂದ ಇದು ಅಂತರರಾಜ್ಯ ವಿಚಾರವಾಗಿದ್ದು, ಸಿಬಿಐ ತನಿಖೆಗೆ ನೀಡಬೇಕು ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ಮತ್ತು ಪಕ್ಷದ ನಾಯಕರಿಗೆ ಸವಾಲು ಹಾಕಿದ್ದು, ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ, ನ್ಯಾಯ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು.
ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಲೆಫ್ಟ್ ಹ್ಯಾಂಡ್, ರೈಟ್ ಹ್ಯಾಂಡ್ ಇದ್ದಾರೆ, ತಪ್ಪು ಮಾಡಿದ್ದನ್ನು ಕೇಳುವುದು ವಿರೋಧ ಪಕ್ಷದವರ ಅಧಿಕಾರ ಮತ್ತು ಹಕ್ಕು, ಉತ್ತರ ಕೊಡಲು ಗೊತ್ತಿಲ್ಲದಿದ್ದರೆ ಕೇಳಿ ತಿಳಿದುಕೊಳ್ಳಲಿ.
ಉದ್ಧಟತನ ಬದಿಗಿಡಿ
ಸಚಿವರೇ ಉದ್ಧಟತನ ಬದಿಗಿಡಿ, ನಿಮ್ಮನ್ನು ಟಾರ್ಗೆಟ್ ಮಾಡಿ ಬಿಜೆಪಿಗೆ ಏನೂ ಆಗಬೇಕಾಗಿಲ್ಲ, ಆಪಾದನೆ ಬಂದಾಗ ಯಾವ ರೀತಿ ಎದುರಿಸಬೇಕು ಎಂಬುದನ್ನು ಕಲಿತುಕೊಳ್ಳಿ, ನ್ಯಾಯ ಕೇಳುತ್ತಿದ್ದೇವೆ, ನೀವು ಭಿತ್ತಿಪತ್ರ ಅಂಟಿಸಿದ ಮಾದರಿಯಲ್ಲೇ ನಾವು ನಿಮ್ಮ ರಾಜೀನಾಮೆಗೆ ಆಗ್ರಹಿಸಿ ಭಿತ್ತಿಪತ್ರ ಅಂಟಿಸಿದ್ದೇವೆ ಎಂದರು.
ಸಚಿನ್ ಆತ್ಮಹತ್ಯೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ, ಇದರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಪ್ರಸ್ತಾಪವಾಗಿದೆ, ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಬಿಜೆಪಿ ಮಾತ್ರವಲ್ಲ, ಮೃತನ ಕುಟುಂಬದವರದ್ದೂ ಆಗ್ರಹವಾಗಿದೆ.
ಬಿಜೆಪಿ ಕಾರ್ಯಕರ್ತರು, ಮುಖಂಡರು 10 ಲಕ್ಷ ರೂ. ಸಂಗ್ರಹಿಸಿ ಮೃತನ ಕುಟುಂಬಕ್ಕೆ ನೀಡಲು ಹೋಗಿದ್ದೆವು, ಅವರು ಕೈಮುಗಿದು ‘ನಮಗೆ ಹಣ ಬೇಡ, ನ್ಯಾಯ ಬೇಕು’ ಎಂದು ತಿಳಿಸಿದರು.
ಪೊಲೀಸರು ನ್ಯಾಯ ಕೊಡಿಸುವ ಭರವಸೆ ಇಲ್ಲ, ಸಿಐಡಿ ತನಿಖೆ ಬೇಕಾಗಿಲ್ಲ, ಸಿಬಿಐಗೆ ಒಪ್ಪಿಸಿ ನ್ಯಾಯ ಕೊಡಿಸಿ ಎಂದು ಮೃತರ ಸೋದರಿಯರು ಮನವಿ ಮಾಡಿದ್ದಾರೆ ಎಂದರು.