ಬೆಂಗಳೂರು:ಬೆಳಗಾವಿಯ ಹಿರಿಯ ಪೋಲಿಸ್ ಅಧಿಕಾರಿಗಳ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮನ್ನು ಎನ್‌ಕೌಂಟರ್ ಮಾಡಿಸುವ ಪ್ರಯತ್ನ ಮಾಡಿದ್ದರೆಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಪೋಲಿಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಪಕ್ಷದ ಮುಖಂಡರ ಜೊತೆಗೂಡಿ ಇಂದು ಪೋಲಿಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದ್ದಲ್ಲದೆ, ಇವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ
ನಾನು ದೂರು ಕೊಟ್ಟ ಬಳಿಕವೂ ಎಫ್‌ಐಆರ್ ಹಾಕದೆ, ನನ್ನನ್ನು ಅಕ್ರಮವಾಗಿ ಬಂಧಿಸಿ, ನನ್ನ ಮೇಲೆ ದೌರ್ಜನ್ಯ ಎಸಗಿ, ಈ ಪ್ರಭಾವಿಗಳ ನಿರ್ದೇಶನದಂತೆ ರಾತ್ರಿಯಿಡೀ ನಿರ್ಜನ ಪ್ರದೇಶಗಳಲ್ಲಿ ವಾಹನದಲ್ಲಿ ಸುತ್ತಾಡಿಸಿ ಕಾನೂನು ಉಲ್ಲಂಘನೆ ಮಾಡಿದ್ದು, ಈ ಪೋಲಿಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರವಿ ಅವರು, ಪೋಲಿಸ್ ನಿರ್ದೇಶಕರು ಮತ್ತು ರಾಜ್ಯಪಾಲರಿಗೆ ನೀಡಿರುವ ದೂರಿನ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಿಂದ ತಮ್ಮನ್ನು ಪಶುವಿನ ರೀತಿ ಪೋಲಿಸರು ಕಿಡ್ನ್ಯಾಪ್ ಮಾಡಿದ್ದರು.
ಫೇಕ್ ಎನ್‌ಕೌಂಟರ್ ಸನ್ನಿವೇಶ
ಇಡೀ ಸನ್ನಿವೇಶ ಫೇಕ್ ಎನ್‌ಕೌಂಟರ್ ರೀತಿ ಹಾಗೂ ಲೈಸೆನ್ಸ್ಡ್ ಸುಪಾರಿ ಕಿಲ್ಲರ್‌ಗಳು ನಡೆದುಕೊಳ್ಳುವ ರೀತಿ ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಪಾಲರ ಭೇಟಿ ವೇಳೆ ಉಪಮುಖ್ಯಮಂತ್ರಿ ಹಾಗೂ ಸಚಿವೆ ವಿರುದ್ಧ ಸವಿಸ್ತಾರವಾದ ವಿವರಣೆ ನೀಡಿದ್ದೇನೆ, ಅವರು ನ್ಯಾಯ ಕೊಡಿಸುತ್ತಾರೆಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮತ್ತು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ವಿರುದ್ಧವೂ ರವಿ ಆರೋಪ ಮಾಡಿದ್ದಾರೆ.
8 ಪುಟಗಳ ಆರೋಪ
ರಾಜ್ಯಪಾಲರಿಗೆ ನೀಡಿದ್ದ 8 ಪುಟಗಳ ದೂರಿನಲ್ಲೂ ಡಿ.ಕೆ.ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಕೊನೆಯ ದಿನ, ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿದ ಹೇಳಿಕೆ ಕುರಿತು ವಿಧಾನ ಪರಿಷತ್‌ನಲ್ಲಿ ಪರ-ವಿರೋಧ ಚರ್ಚೆಗಳು ತಾರಕಕ್ಕೇರಿ, ರವಿ ಮತ್ತು ಸಚಿವೆ ಹೆಬ್ಬಾಳ್ಕರ್ ನಡುವೆ ವಾಕ್ ಸಮರಕ್ಕೆ ಕಾರಣವಾಗಿತ್ತು.
ಈ ಹಂತದಲ್ಲಿ ರವಿ ಅವರು ಸಚಿವೆ ಬಗ್ಗೆ ಅವಾಚ್ಯ ಪದ ಬಳಸಿದರೆಂದು ಅವರ ಬೆಂಬಲಿಗರು ಸುವರ್ಣಸೌಧದೊಳಗೆ ನುಗ್ಗಿ ಹಲ್ಲೆಗೆ ಪ್ರಯತ್ನ ಮಾಡಿದ್ದರು.
ಮಾರ್ಷಲ್‌ಗಳ ಮಧ್ಯ ಪ್ರವೇಶದಿಂದ ರವಿ ಅವರ ಮೇಲೆ ನಡೆಸಿದ್ದ ಹಲ್ಲೆ ವಿಫಲವಾಯಿತು, ನಂತರ ಸಚಿವೆ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಪೋಲಿಸರು ರವಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು.