ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ಮಹತ್ವದ ಔತಣಕೂಟ
ಬೆಂಗಳೂರು:ಪೂರ್ಣಾವಧಿ ಅಧಿಕಾರ ಮುಗಿಸಿ, ಯಾರ ಒತ್ತಡಕ್ಕೂ ಮಣಿಯದೆ ಒಳ್ಳೆ ಆಡಳಿತ ನೀಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಸಚಿವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಡಿ, ಅವರನ್ನು ನಾವು ನಾಯಕರಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಗುರುವಾರ ಸಂಪುಟ ಸಭೆ ನಂತರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ನಿವಾಸದಲ್ಲಿ, ಮಂತ್ರಿಗಳು ಹಾಗೂ ಹಿರಿಯ ಶಾಸಕರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಸಿದ್ದರಾಮಯ್ಯ ಅವರಿಗೆ ಈ ಸಂದೇಶ ನೀಡಿದ್ದಾರೆ.
ಜಾರಕಿಹೊಳಿ ಔತಣಕೂಟ
ಔತಣಕೂಟಕ್ಕೂ ಮೊದಲು ಅನೌಪಚಾರಿಕವಾಗಿ ಮಾತನಾಡುವಾಗ ಜಾರಕಿಹೊಳಿ ಅವರೇ ವಿಷಯ ಪ್ರಸ್ತಾಪಿಸಿ, ಶಿವಕುಮಾರ್ ನಾಯಕತ್ವ ಒಪ್ಪಲು ನಾವು ಸಿದ್ಧರಿಲ್ಲ.
2028ರವರೆಗೂ ನೀವೇ ಅಧಿಕಾರದಲ್ಲಿ ಮುಂದುವರೆಯಬೇಕು, ಆ ನಂತರ ನಾನು, ನಾಯಕತ್ವ ವಹಿಸಿಕೊಳ್ಳಲು ಸಿದ್ಧ, ಒಂದು ವೇಳೆ ವರಿಷ್ಠರು ನನಗೆ ಅವಕಾಶ ಮಾಡಿಕೊಡದಿದ್ದರೆ, ಶಿವಕುಮಾರ್ ನಾಯಕತ್ವಕ್ಕೆ ಅಂದೂ ನನ್ನ ವಿರೋಧ ಇದ್ದೇ ಇರುತ್ತದೆ ಎಂದಿದ್ದಾರೆ.
ಸತೀಶ್ ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಅವರೇ ಸ್ವಲ್ಪ ವಿಚಲಿತರಾದಂತೆ ಕಂಡರಾದರೂ ಉಳಿದ ಕೆಲವು ಸಚಿವರುಗಳು ಇದಕ್ಕೆ ಧನಿಗೂಡಿಸಿದರು.
ಚಲುವರಾಯಸ್ವಾಮಿ ತಟಸ್ಥ
ಚಲುವರಾಯಸ್ವಾಮಿ ಸೇರಿದಂತೆ ತಟಸ್ಥರಾಗಿದ್ದ ಸಚಿವರುಗಳು, ಇಂತಹ ಹೇಳಿಕೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದು ಅರ್ಥವಾಗದೆ, ಮೌನಕ್ಕೆ ಶರಣಾಗಿದ್ದರು.
ಮುಖ್ಯಮಂತ್ರಿ ಮಧ್ಯೆ ಪ್ರವೇಶಿಸಿ, ನೀನು ಕೆಪಿಸಿಸಿ ಅಧ್ಯಕ್ಷನಾಗುವುದಿಲ್ಲವೇ ಎಂದಾಗ, ಸತೀಶ್, 2028ರವರೆಗೂ ನಿಮ್ಮ ಕೈಕೆಳಗೇ ಸಚಿವನಾಗಿ ಕೆಲಸ ನಿರ್ವಹಿಸುತ್ತೇನೆ, ನಿಮ್ಮ ನಂತರ ಮುಖ್ಯಮಂತ್ರಿ ಆಗಲು ಬಯಸಿದ್ದೇನೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಖಾಲಿ ಆಗುತ್ತಿರುವ ವಿಧಾನ ಪರಿಷತ್‌ನ 4 ಸ್ಥಾನಗಳನ್ನು ಭರ್ತಿ ಮಾಡುವ ವಿಷಯ ಮುಂದಿಟ್ಟಿದ್ದಲ್ಲದೆ, ನಾಮಕರಣ ಮಾಡುವುದರಿಂದ ಇವು ನಮ್ಮ ಪಕ್ಷಕ್ಕೇ ಲಭ್ಯವಾಗುತ್ತವೆ.
ಬೋಸರಾಜ್ ಸಭಾಪತಿ
ಆಗ ಪರಿಷತ್‌ನಲ್ಲಿ ನಾವು ಪ್ರತಿಪಕ್ಷಗಳಿಗಿಂತ ಹೆಚ್ಚು ಸಂಖ್ಯಾಬಲ ಹೊಂದುತ್ತೇವೆ, ಬಜೆಟ್ ಅಧಿವೇಶನದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಜಾಗಕ್ಕೆ ಸಚಿವ ಎನ್.ಎಸ್.ಬೋಸರಾಜ್ ಅವರನ್ನು ತರೋಣ, ಉಪಸಭಾಪತಿ ಸ್ಥಾನಕ್ಕೆ ರವಿ ಅವರನ್ನು ಕೂರಿಸೋಣ ಎಂದಿದ್ದಾರೆ.
ಮಧ್ಯೆ ಪ್ರವೇಶಿಸಿದ ಜಾರಕಿಹೊಳಿ ಮತ್ತು ಕೆ.ಎನ್.ರಾಜಣ್ಣ, ನೀವು ಹೇಳಿದವರೇ ಅಭ್ಯರ್ಥಿಗಳಾಗಲಿ, ಕೆಪಿಸಿಸಿ ಅಧ್ಯಕ್ಷರ ಮಾತಿಗೆ ಮನ್ನಣೆ ನೀಡಬೇಡಿ ಎಂದಿದ್ದಾರೆ.
ಇದೇ 7 ರಂದು ದೆಹಲಿಗೆ ತೆರಳುತ್ತಿದ್ದು, ಎಐಸಿಸಿ ಅಧ್ಯಕ್ಷರು ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಜಾರಕಿಹೊಳಿ ಔತಣಕೂಟಕ್ಕೆ ತಮ್ಮ ಜಿಲ್ಲೆಯವರೇ ಆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಹ್ವಾನ ನೀಡಿರಲಿಲ್ಲ, ಇನ್ನು ಉಪಮುಖ್ಯಮಂತ್ರಿ ವಿದೇಶ ಪ್ರವಾಸದಲ್ಲಿ ಇರುವುದರಿಂದ ಅವರ ಅನುಪಸ್ಥಿತಿಯಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ.