ಕಳೆದ ವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಭೋಜನಕೂಟ ನಡೆಯಿತು, ಈ ಕೂಟದಲ್ಲಿ ಮಹತ್ವದ ಚರ್ಚೆ ನಡೆಯಲಿಲ್ಲವಾದರೂ ಅದರ ಉದ್ದೇಶ ಮಾತ್ರ ಸ್ಪಷ್ಟವಾಗಿತ್ತು.
ಯಾಕೆಂದರೆ, ಈ ಭೋಜನಕೂಟದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹಾದೇವಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಜಾರಕಿಹೊಳಿ ಮನದಿಂಗಿತ ಗೊತ್ತೇ ಇತ್ತು.
ಹೀಗಾಗಿ ಅವತ್ತಿನ ಭೋಜನಕೂಟದಲ್ಲಿ ಜಾರಕಿಹೊಳಿ ಮನದಿಂಗಿತದ ಬಗ್ಗೆ ಚರ್ಚೆ ಮಾಡುವುದೇನೂ ಇರಲಿಲ್ಲ.
ಬದಲಿಗೆ ಇಂತಹ ಸಭೆಯ ಮೂಲಕ ಮುಂದಿನ ದಿನಗಳಲ್ಲಿ ಅಹಿಂದ ಬ್ರಿಗೇಡ್ ಮೇಲೆದ್ದು ನಿಲ್ಲಲಿದೆ ಎಂಬ ಸಂದೇಶವನ್ನು ರವಾನಿಸುವುದೇ ಜಾರಕಿಹೊಳಿ ಉದ್ದೇಶವಾಗಿತ್ತು.
ಅಂದ ಹಾಗೆ ಸತೀಶ್ ಜಾರಕಿಹೊಳಿಯವರ ಲೇಟೆಸ್ಟು ಸಿಟ್ಟಿಗೆ ಅವರ ಜಿಲ್ಲೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರಣ. ಈ ಸಮಾರಂಭ ನಡೆಸುವಾಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮನ್ನು ನಿರ್ಲಕ್ಷಿಸಿ ಅವಮಾನಿಸಿದ್ದಾರೆ ಎಂಬುದು ಸತೀಶ್ ಜಾರಕಿಹೊಳಿ ಅವರ ಸಿಟ್ಟು.
ಈ ಶತಮಾನೋತ್ಸವ ಕಾರ್ಯಕ್ರಮ ನಡೆಸುವ ವಿಷಯದಲ್ಲಿ ಬೆಳಗಾವಿ, ಚಿಕ್ಕೋಡಿಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ತಮ್ಮ ಟ್ರೂಪಿನ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಡಿ.ಕೆ.ಶಿವಕುಮಾರ್, ಶತಮಾನೋತ್ಸವದ ಪ್ರತಿಯೊಂದು ಕೆಲಸಗಳನ್ನು ತಮಗೆ ಬೇಕಾದವರಿಂದ ನಿರ್ವಹಿಸಿದರು, ಅಷ್ಟೇ ಅಲ್ಲ, ಅಲ್ಲಿನ ಲೈಟಿಂಗ್ ವ್ಯವಸ್ಥೆಯ ಜವಾಬ್ದಾರಿಯನ್ನೂ ಹೊರ ಜಿಲ್ಲೆಯ ಸಚಿವರೊಬ್ಬರಿಗೆ ವಹಿಸಿದರು.
ಹೀಗೆ ತಮ್ಮ ಜಿಲ್ಲೆಯಲ್ಲಿ ನಡೆದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ತಮ್ಮನ್ನೇ ಸೈಡ್‌ಲೈನು ಮಾಡಿದ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತಿರುಗಿ ಬೀಳುವುದೇ ಸತೀಶ್ ಜಾರಕಿಹೊಳಿ ಅವರ ಲೇಟೆಸ್ಟು ಅಜೆಂಡಾ.
ಅರ್ಥಾತ್, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಕೆಳಗಿಳಿಸಬೇಕು, ಆ ಜಾಗಕ್ಕೆ ತಾವು ಬಂದು ಕೂರಬೇಕು ಎಂಬುದು ಜಾರಕಿಹೊಳಿ ಡಿಮಾಂಡು.
ಅಂದ ಹಾಗೆ, ಈ ಹಿಂದೆ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ’ಒಬ್ಬ ವ್ಯಕ್ತಿ ಒಂದೇ ಹುದ್ದೆ’ ಎಂಬ ಠರಾವು ಪಾಸ್ ಮಾಡಿತ್ತು, ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾಗುತ್ತಾ ಬಂದರೂ, ಡಿ.ಕೆ.ಶಿವಕುಮಾರ್ ಎರಡು ಹುದ್ದೆಗಳಲ್ಲಿ ಮುಂದುವರಿದಿದ್ದಾರೆ, ಹೀಗಾಗಿ ತಕ್ಷಣವೇ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಸಿ ತಮಗೆ ಆ ಪಟ್ಟ ಕೊಡಬೇಕು ಎಂಬುದು ಸತೀಶ್ ಜಾರಕಿಹೊಳಿ ವಾದ.
ಅಂದ ಹಾಗೆ, ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯ ಬಂದಾಗ ಪಕ್ಷದ ವರಿಷ್ಟರು, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯುವವರೆಗೆ ಡಿ.ಕೆ.ಶಿವಕುಮಾರ್ ಅವರೇ ಅಧ್ಯಕ್ಷರಾಗಿರಲಿ ಎಂದಿದ್ದರಂತೆ.
ಆದರೆ, ಒನ್ ಮ್ಯಾನ್ ಒನ್ ಪೋಸ್ಟಿನ ಠರಾವನ್ನು ವರಿಷ್ಟರಿಗೆ ನೆನಪಿಸುತ್ತಿರುವ ಜಾರಕಿಹೊಳಿ, ಅಹಿಂದ ವರ್ಗದ ಮತಗಳನ್ನು ಕ್ರೋಡೀಕರಿಸಬೇಕೆಂದರೆ ಅಹಿಂದ ವರ್ಗಕ್ಕೆ ಕೆಪಿಸಿಸಿ ಪಟ್ಟ ಸಿಗಲೇಬೇಕು ಅಂತ ವರಿಷ್ಟರಿಗೆ ಸಂದೇಶ ರವಾನಿಸಿದ್ದಾರೆ.
ಅಷ್ಟೇ ಅಲ್ಲ, ಪಕ್ಷ ಅಧಿಕಾರದಲ್ಲಿದ್ದಾಗ ಎದುರಾಗುವ ಎಲ್ಲ ಚುನಾವಣೆಗಳನ್ನು ಸರ್ಕಾರವೇ ಮುಂಚೂಣಿಯಲ್ಲಿ ನಿಂತು ನಿಭಾಯಿಸುತ್ತದೆ, ಹೀಗಾಗಿ, ಇವತ್ತು ನಮಗೆ ಅಗತ್ಯವಾಗಿರುವುದು ಅಹಿಂದ ವರ್ಗಗಳ ಕನ್‌ಸಾಲಿಡೇಷನ್ನೇ ಹೊರತು ಒಬ್ಬ ವ್ಯಕ್ತಿ ಮುಖ್ಯವಲ್ಲ ಎಂಬುದು ಜಾರಕಿಹೊಳಿ ಮೆಸೇಜು.
ಇನ್ನು ಮೊನ್ನೆ ಮೊನ್ನೆ ನಡೆದ ಬೈ-ಎಲೆಕ್ಷನ್ ಗೆಲುವಿನ ಕ್ರೆಡಿಟ್ಟನ್ನು ಪಕ್ಷದ ಅಧ್ಯಕ್ಷರಿಗಷ್ಟೇ ಕೊಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂಡೂರಿನ ಗೆಲುವಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಿಗ್ಗಾಂವಿಯ ಗೆಲುವಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಚನ್ನಪಟ್ಟಣದ ಗೆಲುವಿಗೆ ಡಿ.ಕೆ.ಶಿವಕುಮಾರ್ ಕಾರಣ ಅಂತ ಕ್ರೆಡಿಟ್ಟನ್ನು ಹಂಚಿದ್ದರು.
ಇದರ ಮಧ್ಯೆಯೇ ಮೇಲೆದ್ದು ನಿಂತಿರುವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಕುಂತಿದ್ದಾರೆ.
ಆದರೆ, ಬರೀ ಕಣ್ಣಿಟ್ಟು ಕೂತರೆ ಸಾಲದಲ್ಲ, ಹೀಗಾಗಿ ಭೋಜನಕೂಟ ನಡೆಸುವ ಮೂಲಕ ತಮ್ಮ ಹಿಂದೆ ಶಾಸಕರ ದಂಡಿದೆ ಎಂಬ ಸಂದೇಶ ರವಾನಿಸಿದ್ದಾರೆ.
ಫೋರ್ ಮ್ಯಾನ್ ಆರ್ಮಿ ರೆಡಿ
ಅಂದ ಹಾಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿಷಯದಲ್ಲಿ ಸತೀಶ್ ಜಾರಕಿಹೊಳಿ ಕೋಲ್ಡ್ ವಾರ್ ಶುರು ಮಾಡಿ ಹಲವು ಕಾಲವೇ ಕಳೆದಿದೆ.
ತಾವು ಉಸ್ತುವಾರಿ ಸಚಿವರಾದರೂ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಕೈ ಮೇಲಾಗದಂತೆ ಡಿಕೆಶಿ ತಡೆದಿದ್ದಾರೆ ಎಂಬುದು ಇದಕ್ಕೊಂದು ಕಾರಣವಾದರೆ, ಇನ್ನೂ ಹಲವು ಎಪಿಸೋಡುಗಳು ಸೇರಿ ಡಿಕೆಶಿ ವಿರುದ್ಧದ ಕೋಲ್ಡ್ ವಾರ್ ಮತ್ತಷ್ಟು ತೀವ್ರತೆ ಪಡೆದಿದೆ.
ಇದರ ಭಾಗವಾಗಿಯೇ ಮೇಲಿಂದ ಮೇಲೆ ಗೃಹ ಸಚಿವ ಡಾ.ಪರಮೇಶ್ವರ್, ಸಮಾಜಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಜತೆ ರಹಸ್ಯ ಸಭೆಗಳನ್ನು ಮಾಡುತ್ತಿರುವ ಸತೀಶ್ ಜಾರಕಿಹೊಳಿ, ಯಾವ ಕಾರಣಕ್ಕೂ ಡಿ.ಕೆ.ಶಿವಕುಮಾರ್ ಸಿಎಂ ಆಗದಂತೆ ನೋಡಿಕೊಳ್ಳಬೇಕು ಎಂಬ ಅಜೆಂಡಾಗೆ ಶಕ್ತಿ ನೀಡುತ್ತಿದ್ದಾರೆ.
ಇದರ ಭಾಗವಾಗಿ ಸಿದ್ದರಾಮಯ್ಯ ಅವರ ಬಳಿ ಮಾತನಾಡುತ್ತಿರುವ ಈ ’ಫೋರ್ ಮ್ಯಾನ್ ಆರ್ಮಿ’ ’2028ರ ತನಕ ಯಾವ ಕಾರಣಕ್ಕೂ ನೀವು ಸಿಎಂ ಹುದ್ದೆಯಿಂದ ಕೆಳಗಿಳಿಯಬಾರದು, ಹಾಗೊಂದು ವೇಳೆ ಒಪ್ಪಂದ-ಗಿಪ್ಪಂದ ಅಂತ ನೀವು ಕೆಳಗಿಳಿದರೆ ನಾವು ಹೇಳುವವರು ಸಿಎಂ ಆಗಬೇಕು, ಬೇಕಿದ್ದರೆ ಮುಂದಿನ ನಾಯಕ ಯಾರು ಅಂತ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿ, ಫೈಟು ಮಾಡಲು ನಾವು ರೆಡಿ’ ಅಂತ ಹೇಳುತ್ತಿದೆ.
ಆದರೆ, ಅವರು ಮಾತನಾಡಿದಾಗಲೆಲ್ಲ ಸ್ಪಷ್ಟವಾಗಿ ಉತ್ತರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ’ಅಧಿಕಾರ ಹಂಚಿಕೆಯ ವಿಷಯದಲ್ಲಿ ಒಪ್ಪಂದವೇನೂ ಆಗಿಲ್ಲ, ಆದರೆ, ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮಾತನಾಡಿದ ವರಿಷ್ಟರು, ಮುಂದಿನ ದಿನಗಳಲ್ಲಿ ನಾವು ಕೊಡುವ ಡೈರೆಕ್ಷನ್ ಅನ್ನು ಪಾಲಿಸಿ ಎಂದಿದ್ದಾರೆ, ಆದರೆ, ಅದೇನು ಡೈರೆಕ್ಷನ್ನು ಅಂತ ಈವತ್ತಿನ ತನಕ ಅವರು ಹೇಳಿಲ್ಲ, ಹೀಗಾಗಿ ಆ ಡೈರೆಕ್ಷನ್ ಏನು ಅನ್ನುವುದು ಗೊತ್ತಾಗುವ ತನಕ ನಾವು ಮಾತನಾಡಲು ಸಾಧ್ಯವಿಲ್ಲ, ಹಾಗೊಂದು ವೇಳೆ ನೀವು ಹೇಳಿದ್ದೇ ಡೈರೆಕ್ಷನ್ ಆಗಿ ಬಂದರೆ ಆ ಸಂದರ್ಭದಲ್ಲಿ ಏನು ಹೇಳಬೇಕೋ ಅದನ್ನು ಹೇಳೋಣ’ ಅಂದಿದ್ದಾರೆ.
ಆದರೆ ಸದ್ಯದ ಪರಿಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿರುವುದೇನೋ ಸರಿ, ಹಾಗಂತ ನಾವು ಸುಮ್ಮನಿರುವುದು ಸರಿಯಲ್ಲವಲ್ಲ, ಕರ್ನಾಟಕದಲ್ಲಿ ಪಕ್ಷ ಕಟ್ಟಲು ನಾವೂ ದುಡಿದಿದ್ದೇವೆ, ಹೀಗಾಗಿ ಪರ್ಯಾಯ ನಾಯಕನ ಆಯ್ಕೆ ವಿಷಯ ಬಂದರೆ ನಾವು ಒಟ್ಟಾಗಿ ನಮ್ಮ ಬಲ ತೋರಿಸಬೇಕು ಅಂತ ಫೋರ್ ಮ್ಯಾನ್ ಆರ್ಮಿ ನಿರ್ಧರಿಸಿದೆ.
ವಿಜಯೇಂದ್ರ ಸೇಫ್ಟಿಗೆ ಎಲೆಕ್ಷನ್
ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸೇಫ್ಟಿಗೆ ಎಲೆಕ್ಷನ್ ನಡೆಸಲು ವರಿಷ್ಟರು ಸೂಚಿಸಿದ್ದಾರೆ.
ವಿಜಯೇಂದ್ರ ಅವರು ದಿಲ್ಲಿಗೆ ಬರುವುದು, ಯತ್ನಾಳ್ ಅಂಡ್ ಗ್ಯಾಂಗಿನ ವಿರುದ್ಧ ದೂರು ನೀಡುವುದು, ಇದಕ್ಕೆ ಪ್ರತಿಯಾಗಿ ತಾವು ಮೌನವಾಗಿರಲು ಯತ್ನಾಳ್ ಮತ್ತಿತರರಿಗೆ ಹೇಳುವುದು ನಡೆದೇ ಇದೆ.
ಅರ್ಥಾತ್, ರಾಜ್ಯ ಬಿಜೆಪಿಯಲ್ಲಿ ಹಾವು ಸಾಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ ಎಂಬ ಸ್ಥಿತಿ ಮುಂದುವರಿದೇ ಇದೆ.
ಇದಕ್ಕೆ ಮುಖ್ಯ ಕಾರಣವೇನು, ವಿಜಯೇಂದ್ರ ಅವರು ಚುನಾಯಿತ ಅಧ್ಯಕ್ಷರಲ್ಲ, ಬದಲಿಗೆ ನೇಮಕಗೊಂಡ ಅಧ್ಯಕ್ಷ, ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನಡೆಸಿದರೆ ಸದ್ಯಕ್ಕೆ ಸಮಸ್ಯೆ ಬಗೆಹರಿಯುತ್ತದೆ.
ನಾಳೆ ಬಿಜೆಪಿಯ ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು ಸೇರಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕು, ಈ ಸಂದರ್ಭದಲ್ಲಿ ವಿಜಯೇಂದ್ರ ವರ್ಸಸ್ ವಿರೋಧಿಗಳ ನಡುವೆ ಫೈಟು ನಡೆಯುತ್ತದೆ.
ಅಲ್ಲಿ ಯಾರು ಹೆಚ್ಚು ಮತ ಪಡೆಯುತ್ತಾರೋ, ಸಹಜವಾಗಿ ಅವರು ಅಧ್ಯಕ್ಷರಾಗುತ್ತಾರೆ, ಇವತ್ತಿನ ಸ್ಥಿತಿಯಲ್ಲಿ ಚುನಾವಣೆ ನಡೆದರೆ ಯಾರಿಗೆ ಬಲ ಹೆಚ್ಚು, ಸಹಜವಾಗಿ ವಿಜಯೇಂದ್ರ ಅವರ ಬಲವೇ ಹೆಚ್ಚು, ಹೀಗೆ ಚುನಾವಣೆಯಲ್ಲಿ ಗೆದ್ದು ಅವರು ಅಧ್ಯಕ್ಷರಾದರೆ ವಿಜಯೇಂದ್ರ ಅವರನ್ನಿಳಿಸಿ ಎನ್ನುವವರ ಧ್ವನಿ ಕುಗ್ಗುತ್ತದೆ, ಹಾಗಾಗಲಿ ಎಂಬುದು ವರಿಷ್ಟರ ಬಯಕೆ.
ಹಾಗಂತಲೇ ಇತ್ತೀಚೆಗೆ ವಿಜಯೇಂದ್ರ ದಿಲ್ಲಿಗೆ ಹೋದ ಸಂದರ್ಭವೊಂದರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಈ ಕುರಿತು ಗೀತೋಪದೇಶ ಮಾಡಿದ್ದರಂತೆ.
ಅದರ ಪ್ರಕಾರ ನೋಡಿದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲ್ಲುವ ಹಾಟ್ ಫೆವರೀಟ್ ಅಂದರೆ ವಿಜಯೇಂದ್ರ ಅವರೇ, ಹೀಗಾಗಿ ಚುನಾವಣೆಗೆ ಅಣಿಯಾಗುತ್ತಿರುವ ವಿಜಯೇಂದ್ರ ಅವರು ಮಂಡಲ ಮಟ್ಟದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಫೋರ್ಸು ಕೊಡಲು ಹೊರಟಿದ್ದಾರೆ.
ಆದರೆ, ಇದೊಂದು ಕೆಲಸದಿಂದ ವಿಜಯೇಂದ್ರ ಅವರ ಖುರ್ಚಿ ಗಟ್ಟಿಯಾಗಬಹುದೇ ವಿನಃ ರಾಜ್ಯ ಬಿಜೆಪಿ ಎದುರಿಸುತ್ತಿರುವ ಬೇಗುದಿಯೇನೂ ಕಡಿಮೆಯಾಗುವುದಿಲ್ಲ, ಕಾರಣ, ಇವತ್ತು ವಿಜಯೇಂದ್ರ ಅವರ ವಿರುದ್ಧ ತಿರುಗಿ ಬಿದ್ದ ಪಕ್ಷದ ಹಿರಿಯರೇನಿದ್ದಾರೆ, ಅವರಿಗೆ ವಿಜಯೇಂದ್ರ ಅವರ ಜತೆ ಹೊಂದಿಕೊಂಡು ಹೋಗುವ ಇಚ್ಛೆಯಿಲ್ಲ.
ಹೀಗಾಗಿ ವಿಜಯೇಂದ್ರ ಅವರನ್ನು ಸೇಫ್ ಮಾಡಿ, ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಪಟ್ಟಿಗೆ ಸರ್ಜರಿ ಮಾಡಿದರೂ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ.
ಪ್ರಿಯಾಂಕ್ ವಿರುದ್ಧ ಬಿಜೆಪಿಗೇಕೆ ಸಿಟ್ಟು?
ಈ ಮಧ್ಯೆ, ಗುತ್ತಿಗೆದಾರರೊಬ್ಬರ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೋರಾಟಕ್ಕಿಳಿದಿದೆಯಲ್ಲ?
ಈ ಹೋರಾಟಕ್ಕೆ ಅದು ಹೊಸ ಹೊಸ ಟ್ವಿಸ್ಟು ಕೊಡುತ್ತಲೇ ಇದೆ, ಆದರೆ, ಈ ಮಟ್ಟದಲ್ಲೇಕೆ ಅದು ಪ್ರಿಯಾಂಕ್ ಖರ್ಗೆ ವಿರುದ್ಧ ಹೋರಾಡುತ್ತಿದೆ ಎಂಬುದಕ್ಕೆ ಹೊಸತೊಂದು ವ್ಯಾಖ್ಯಾನ ಶುರುವಾಗಿದೆ.
ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕಾಂಗ್ರೆಸ್ಸಿಗರ ಅಂಬೇಡ್ಕರ್ ವ್ಯಸನದ ಬಗ್ಗೆ ಮಾತನಾಡಿದರಲ್ಲ, ಇದರ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಆಕ್ರೋಶ ಶುರುವಾಯಿತು, ಕರ್ನಾಟಕದಲ್ಲಂತೂ ಅಮಿತ್ ಷಾ ಹೇಳಿಕೆಯ ವಿರುದ್ಧ ಒಂದರ ಹಿಂದೊಂದರಂತೆ ಜಿಲ್ಲಾ ಮಟ್ಟದಲ್ಲಿ ಬಂದ್‌ಗಳು ನಡೆಯುತ್ತಿವೆ.
ಹೀಗೆ ಅಮಿತ್ ಷಾ ಹೇಳಿಕೆಯ ವಿರುದ್ಧ ಕರ್ನಾಟಕದಲ್ಲಿ ಶುರುವಾಗಿರುವ ಆಕ್ರೋಶ ಸಹಜವಾಗಿಯೇ ಬಿಜೆಪಿಯ ತಳಮಳಕ್ಕೆ ಕಾರಣವಾಗಿದೆ.
ಹೀಗಾಗಿಯೇ, ಈ ಸಮಯದಲ್ಲಿ ಕೈಗೆ ಸಿಕ್ಕ ಅಸ್ತ್ರ ಹಿಡಿದು ಬೀದಿಗಿಳಿದಿರುವ ಬಿಜೆಪಿ ಪ್ರಿಯಾಂಕ್ ಖರ್ಗೆ ವಿರುದ್ಧ ಹೊಸ ಹೊಸ ಹೋರಾಟಗಳನ್ನು ಸಂಘಟಿಸುತ್ತಿದೆ.
ಅಂದ ಹಾಗೆ, ಪ್ರಿಯಾಂಕ್ ಖರ್ಗೆ ವಿಷಯದಲ್ಲಿ ಸಂಘ ಪರಿವಾರಕ್ಕೆ ಅಸಮಾಧಾನವಿರುವುದು ರಹಸ್ಯವೇನಲ್ಲ, ಸೆಕ್ಯುಲರಿಸಂ ವಿಷಯ ಬಂದಾಗ ಸಿಎಂ ಸಿದ್ದರಾಮಯ್ಯ ಮತ್ತು ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನಂತರ ಕಾಂಕ್ರೀಟ್ ಆಗಿ ಮಾತನಾಡುವವರು ಪ್ರಿಯಾಂಕ್ ಖರ್ಗೆ, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದ ಪೋಲೀಸ್ ನೇಮಕಾತಿಗಳ ಅವ್ಯವಹಾರವನ್ನು ಎತ್ತಿ ತೋರಿಸಿದವರೂ ಪ್ರಿಯಾಂಕ್ ಖರ್ಗೆ.
ಹೀಗಾಗಿ, ಏಕಕಾಲಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದ ಹಿಟ್‌ಲಿಸ್ಟ್‌ನಲ್ಲಿರುವ ಅವರ ವಿರುದ್ಧ ಹೋರಾಟ ನಡೆಸಿದರೆ, ಅದು ಅಮಿತ್ ಷಾ ಎಪಿಸೋಡನ್ನೂ ಮಂಕು ಮಾಡುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ.
ಆದರೆ, ಅದರ ಈ ಹೋರಾಟ ಯಶಸ್ವಿಯಾಗುತ್ತದೋ ಅಥವಾ ಕರ್ನಾಟಕದ ನೆಲೆಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಗಟ್ಟಿ ನೆಲೆಯ ಸೆಕ್ಯುಲರ್ ನಾಯಕ ಅಂತ ಎಮರ್ಜ್ ಮಾಡುತ್ತದೋ ಕಾದು ನೋಡಬೇಕು.
ಆರ್.ಟಿ.ವಿಠ್ಠಲಮೂರ್ತಿ