ಆತಂಕ ಪಡುವ ಅಗತ್ಯವಿಲ್ಲ: ರಾಜ್ಯ ಸರ್ಕಾರದ ಪಷ್ಟನೆ
ಬೆಂಗಳೂರು:ಮಹಾಮಾರಿ ಕೋವಿಡ್-19 ಕೊನೆಗೊಂಡಿತೆಂದು ನೆಮ್ಮದಿಯ ಉಸಿರು ಬಿಡುವ ಬೆನ್ನಲ್ಲೇ ರಾಜ್ಯದಲ್ಲಿ ಚೀನಾದ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (ಎಚ್‌ಎಂಪಿವಿ) ಪತ್ತೆಯಾಗಿ ಜನತೆಯನ್ನು ಬೆಚ್ಚಿಬೀಳಿಸಿದೆ.
ಎಚ್‌ಎಂಪಿ ವೈರಸ್ ರಾಜ್ಯದಲ್ಲಿ ಎರಡು ಶಿಶುಗಳಲ್ಲಿ ದೃಢಪಟ್ಟಿದೆ, ಆದರೆ, ಸರ್ಕಾರ, ಈ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ರಾಜ್ಯದಲ್ಲಿ ಕಂಡುಬಂದಿರುವ ಈ ವೈರಸ್‌ಗೂ ಚೀನಾದ ಲ್ಲಿ ಕಾಣಿಸಿಕೊಂಡಿರುವ ವೈರಸ್‌ಗೂ ಹೋಲಿಕೆ ಇದೆಯೇ ಎಂಬ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಹೇಳಿದ್ದಾರೆ.
ಎರಡು ಶಿಶುಗಳಲ್ಲಿ ಪತ್ತೆ
ಎರಡು ವರ್ಷದೊಳಗಿನ ಶಿಶುಗಳಲ್ಲಿ ಶೀಘ್ರವಾಗಿ ಹರಡುವ ಈ ವೈರಸ್ ನಗರದಲ್ಲಿ 8 ಹಾಗೂ 3 ತಿಂಗಳ ಮಗುವಿನಲ್ಲಿ ಪತ್ತೆಯಾಗಿದೆ.
ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (ಎಚ್‌ಎಂಪಿವಿ) ಎಂದು ಗುರುತಿಸಲಾದ ಈ ವೈರಸ್ ರೋಗ ಲಕ್ಷಣಗಳು ಕೋವಿಡ್-19ರಂತೆಯೇ ಇವೆ.
ನಗರದಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣದ ಪ್ರಕಾರ, 8 ತಿಂಗಳ ಮಗುವಿಗೆ ಕೆಲವು ದಿನಗಳ ಹಿಂದೆ ಜ್ವರ ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ರಕ್ತ ಪರೀಕ್ಷೆ ಮಾಡಿದಾಗ ಶಿಶುವಿನಲ್ಲಿ ಎಚ್‌ಎಂಪಿ ವೈರಸ್ ಇರುವುದು ಪತ್ತೆಯಾಗಿದೆ.
ಮತ್ತೊಂದು ಪ್ರಕರಣದಲ್ಲಿ, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾದ ಮೂರು ತಿಂಗಳ ಹೆಣ್ಣು ಶಿಶುವಿನಲ್ಲಿಯೂ ಎಚ್‌ಎಂಪಿ ವೈರಸ್ ಇರುವುದು ದೃಢಪಟ್ಟಿದೆ, ಆದರೆ, ಶಿಶುವನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಮ್ಯೂಟೆಷನ್ ಆದ ಮಾಹಿತಿ ಇಲ್ಲ
ಎಚ್‌ಎಂಪಿ ವೈರಸ್ ಪತ್ತೆಯಿಂದ ಯಾರೂ ಆತಂಕ, ಗಾಬರಿ ಪಡುವ ಅಗತ್ಯವಿಲ್ಲ, ಎಚ್‌ಎಂಪಿ ವೈರಸ್ ಭಾರತದಲ್ಲೂ ಇದೆ, ಆದರೆ, ಅದು ಮ್ಯೂಟೆಷನ್ ಆಗಿರುವ ಕುರಿತು ಯಾವುದೇ ಮಾಹಿತಿ ಇಲ್ಲ.
ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಹೇಗಿದೆ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ, ಹೀಗಾಗಿ ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ ಎಚ್‌ಎಂಪಿ ವೈರಸ್ಸಾ ಅಥವಾ ಚೀನಾ ತಳಿಯೇ ಎಂಬ ಗೊಂದಲ ಇದೆ.
ಭಾರತದಲ್ಲೂ ಸಾಮಾನ್ಯ ಎಚ್‌ಎಂಪಿ ವೈರಸ್ ಶೇ 0.78 ರಷ್ಟು ಕಾಣಿಸುತ್ತದೆ, ಸದ್ಯ ಸೋಂಕು ಪತ್ತೆಯಾಗಿರುವ ಮಗು ಮತ್ತು ಅದರ ಕುಟುಂಬದವರು ಪ್ರವಾಸ ಮಾಡಿದ (ಟ್ರಾವೆಲ್ ಹಿಸ್ಟರಿ) ಮಾಹಿತಿ ಇಲ್ಲ, ಈ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಪರಿಶೀಲನೆ ನಡೆಸುತ್ತಿದೆ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸೂಕ್ತ ಮುನ್ನೆಚ್ಚರಿಕೆ
ರಾಜ್ಯದಲ್ಲಿ ಪತ್ತೆಯಾಗಿರುವ ವೈರಸ್ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ, ಕೇಂದ್ರದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ತಿಳಿಸಿದೆ.
ಚೀನಾದಲ್ಲಿ ಆತಂಕಕ್ಕೆ ಕಾರಣವಾಗಿದೆ ಎನ್ನಲಾದ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (ಎಚ್‌ಎಂಪಿವಿ) ಹೊಸದೇನಲ್ಲ, 2001ರಲ್ಲಿ ಈ ವೈರಸ್ ಕಂಡುಹಿಡಿಯಲಾಗಿತ್ತು ಎಂಬುದಾಗಿ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತಿಳಿಸದೆ.
ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಕಾಯಿಲೆ, ಇದು ಎಸ್ ಆರ್ ಎಸ್-ಸಿಒವಿ-2 ವೈರಸ್‌ನಿಂದ ಉಂಟಾಗುತ್ತದೆ, ಎಚ್‌ಎಂಪಿವಿ ಮತ್ತು ಕೊರೊನಾ ವೈರಸ್ ನಡುವೆ ಕೆಲವು ಹೋಲಿಕೆ ಇವೆಯಾದರೂ ಸದ್ಯದ ಪರಿಸ್ಥಿತಿಯಲ್ಲಿ ಎಚ್‌ಎಂಪಿ ವೈರಸ್‌ನಿಂದ ಭೀತಿ ಪಡುವ ಅಗತ್ಯವಿಲ್ಲ.
ಅಪಾಯಕ್ಕೆ ಒಳಗಾಗುವ ಸಾಧ್ಯತೆ
ಎರಡೂ ವೈರಸ್‌ಗಳು ಎಲ್ಲಾ ವಯೋಮಾನದವರಲ್ಲಿ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ, ಚಿಕ್ಕ ಮಕ್ಕಳು, ಹಿರಿಯ ವಯಸ್ಕರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ.
ಸದ್ಯದ ಪರಿಸ್ಥಿತಿಯಲ್ಲಿ ಎಚ್‌ಎಂಪಿ ವೈರಸ್ ಹರಡುವಿಕೆ ತಡೆಗಟ್ಟಲು ಯಾವುದೇ ಲಸಿಕೆ ಲಭ್ಯವಿಲ್ಲ, ಭಾರತದಲ್ಲಿ ಯಾವುದೇ ರೀತಿಯ ಆತಂಕ ಪಡಬೇಕಾದ ಅಗತ್ಯವೂ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.