ಸಾರಿಗೆ ನೌಕರರ ವೈದ್ಯಕೀಯ ಚಿಕಿತ್ಸೆಗೆ ನಿರ್ಲಕ್ಷ್ಯ ತೋರಬಾರದು
ಬೆಂಗಳೂರು:ನಮ್ಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಮತ್ತು ಅವರ ಕುಟುಂಬ ವರ್ಗದವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ಹಾಗೂ ಉದಾಸೀನತೆ ತೋರಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಗಳಿಗೆ ಇಂದಿಲ್ಲಿ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಸವಲತ್ತು ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಸಾರಿಗೆ ನೌಕರರು ದುಡಿಮೆ ಮೂಲಕ ಸಂಸ್ಥೆ ಮತ್ತು ನಿಗಮದ ಆದಾಯ ಹೆಚ್ಚಿಸುತ್ತಿದ್ದು, ಇವರ ಆರೋಗ್ಯ ಸರ್ಕಾರ, ಸಂಸ್ಥೆ ಮತ್ತು ನಿಗಮದ ಜವಾಬ್ದಾರಿಯಾಗಿದೆ ಎಂದರು.
275 ಆಸ್ಪತ್ರೆಗಳೊಂದಿಗೆ ಒಡಂಬಡಿಕೆ
ಸಾರಿಗೆ ನೌಕರರ ವೈದ್ಯಕೀಯ ಚಿಕಿತ್ಸೆಗೆ 275 ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಒಪ್ಪಂದ ಆಸ್ಪತ್ರೆಗಳ ಸಂಖ್ಯೆ ಇನ್ನೂ ಹೆಚ್ಚಲಿದೆ, ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಊರಿನಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ.
ನೌಕರರ ಕುಟುಂಬದವರು ಸಹಾ ನೆಲೆಸಿರುವ ಊರಿನಲ್ಲೇ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದಾದಂತಹ ಅತ್ಯಂತ ಸುಲಲಿತ ಯೋಜನೆ ಇದಾಗಿದ್ದು, ನೌಕರರು ಮತ್ತು ಕುಟುಂಬ ವರ್ಗದವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಮಹಿಳೆಯರ ಆರ್ಥಿಕ ಸಾಮರ್ಥ್ಯ
ಸಮಾಜದಲ್ಲಿ ಲಿಂಗ ತಾರತಮ್ಯ ಹೋಗಲಾಡಿಸಲು ಮತ್ತು ಮಹಿಳೆಯರ ಆರ್ಥಿಕ ಸಾಮರ್ಥ್ಯ ಹೆಚ್ಚಿಸಲು ಶಕ್ತಿ ಹಾಗೂ ಇತರೆ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಶಕ್ತಿ ಯೋಜನೆಯಿಂದಾಗಿ ಧಾರ್ಮಿಕ ಮತ್ತು ಪ್ರವಾಸೋದ್ಯಮ ಸ್ಥಳಗಳಿಗೆ ಪ್ರವಾಸ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ, ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಗಳೂ ತಮಗೆ ಪತ್ರ ಬರೆದಿದ್ದಾರೆ ಎಂದರು.