ಬೆಂಗಳೂರು:ವರಿಷ್ಠರು ಭೇಟಿಗೆ ನಿರಾಕರಿಸಿದ ಬೆನ್ನಲ್ಲೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಾಳೆ ರಾತ್ರಿ ಪಕ್ಷದ ಅಹಿಂದ ಸಚಿವರು ಮತ್ತು ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾರೆ.
ನಗರದ ಪಂಚತಾರಾ ಹೋಟೆಲ್‌ನಲ್ಲಿ ಔತಣಕೂಟ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು ಭಾಗಿಯಾಗಲಿದ್ದಾರೆ.
ಔತಣಕೂಟದ ಬಗ್ಗೆ ಗೃಹ ಸಚಿವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಪರಿಶಿಷ್ಟ ಜಾತಿ ಮತ್ತು ವರ್ಗದ ಸಮಸ್ಯೆಗಳು ಹಾಗೂ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ನಮ್ಮ ಸಚಿವರು ಮತ್ತು ಶಾಸಕರಿಗೆ ಔತಣಕೂಟ ನಾನೇ ಏರ್ಪಡಿಸಿದ್ದೇನೆ ಎಂದಿದ್ದಾರೆ.
ಪರಿಶಿಷ್ಟರ ಬೃಹತ್ ಸಮಾವೇಶ
ಪರಿಶಿಷ್ಟ ಜಾತಿ, ವರ್ಗದವರ ಬೃಹತ್ ಸಮಾವೇಶ ಹಮ್ಮಿಕೊಳ್ಳುತ್ತಿದ್ದು, ಅದರ ಪೂರ್ವಬಾವಿಯಾಗಿ ಈ ಔತಣಕೂಟ ನಡೆಯುತ್ತಿದ್ದು, ನಮ್ಮ ಸಮಾಜದ ಶಾಸಕರು, ಸಚಿವರನ್ನು ಕರೆದಿದ್ದು, ಇದರಲ್ಲಿ ಬೇರೆ ಸಮುದಾಯದವರು ಪಾಲ್ಗೊಂಡರೂ ಅಭ್ಯಂತರ ಇಲ್ಲ.
ಮುಖ್ಯಮಂತ್ರಿ ಅವರಿಗೆ ನಾನೇ ಖುದ್ದಾಗಿ ಆಹ್ವಾನ ನೀಡಿದ್ದೇನೆ ಎಂದರಾದರೂ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನದ ಬಗ್ಗೆ ಏನನ್ನೂ ಹೇಳಲಿಲ್ಲ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಳೆದ ಗುರುವಾರ ನಡೆದ ಔತಣಕೂಟದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸೋಮವಾರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಬೇಕಿತ್ತು.
ವರಿಷ್ಠರಿಂದ ಮುಜುಗರ
ವರಿಷ್ಠರು ಭೇಟಿಗೆ ಸಮಯಾವಕಾಶ ನೀಡದ್ದರಿಂದ ಸಿದ್ದರಾಮಯ್ಯ ಬಣ ಭಾರೀ ಮುಜುಗರಕ್ಕೆ ಒಳಗಾಗಿದೆ.
ವರಿಷ್ಠರಿಗೆ ಸಂದೇಶ ಅಥವಾ ಎಚ್ಚರಿಕೆ ರವಾನಿಸುವ ಉದ್ದೇಶದಿಂದ ಗೃಹ ಸಚಿವರು ಔತಣಕೂಟ ಏರ್ಪಡಿಸಿದ್ದಾರೆಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಜಾರಕಿಹೊಳಿ ನಿವಾಸದಲ್ಲಿ ಸೇರಿದ್ದ ಅಹಿಂದ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಕೆಲವು ನಿರ್ಣಯಗಳನ್ನು ಕೈಗೊಂಡಿದ್ದರು.
ನಿಯಮ ಪಾಲನೆ ಆಗಬೇಕು
ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಅಧಿಕಾರದಲ್ಲಿ ಮುಂದುವರೆಯಬೇಕು, ಪಕ್ಷದ ಸಿದ್ಧಾಂತದಂತೆ ಒಬ್ಬರಿಗೆ ಒಂದೇ ಹುದ್ದೆ ನಿಯಮ ಪಾಲನೆ ಆಗಬೇಕು.
ಎರಡು ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿ, ಪರಿಶಿಷ್ಟ ಜಾತಿ, ಇಲ್ಲವೇ ವರ್ಗಕ್ಕೆ ಈ ಹುದ್ದೆ ನೀಡುವಂತೆ ವರಿಷ್ಠರನ್ನು ಒತ್ತಾಯಿಸುವ ನಿರ್ಣಯವನ್ನು ಸಭೆ ಕೈಗೊಂಡಿತ್ತು.