ಬೆಂಗಳೂರು:ಎಚ್‌ಎಂಪಿ ವೈರಾಣು (ಹ್ಯೂಮನ್ ಮೆಟಾನ್ಯೂಮೋ ವೈರಸ್) ಬಗ್ಗೆ ತೀವ್ರ ನಿಗಾ ವಹಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.
ಕರ್ನಾಟಕ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಎಚ್‌ಎಂಪಿ ವೈರಾಣು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ದೆಹಲಿಯಲ್ಲಿಂದು ರಾಜ್ಯ ಸರ್ಕಾರಗಳಿಗೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವಂತೆ ತಿಳಿಸಿದೆ.
ನಿರ್ವಹಣೆಗೆ ಸೂಕ್ತ ಕ್ರಮ
ಉಸಿರಾಟ ಸಂಬಂಧಿ ಕಾಯಿಲೆ ಮತ್ತು ಎಚ್‌ಎಂಪಿವಿ ಪ್ರಕರಣಗಳ ನಿರ್ವಹಣೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದೆ.
ಚೀನಾದಲ್ಲಿ ಈ ವೈರಾಣು ಪ್ರಕರಣಗಳು ಏರಿಕೆ ಆಗುತ್ತಿರುವ ಬೆನ್ನಲ್ಲೇ ರಾಷ್ಟ್ರದ ಐದು ರಾಜ್ಯಗಳಲ್ಲಿ ಪ್ರಕರಣ ಪತ್ತೆಯಾಗಿದೆ, ಮುಂದಿನ ದಿನಗಳಲ್ಲಿ ವೈರಾಣು ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.
ಅಲ್ಲದೆ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಸಿರಾಟ ಸಮಸ್ಯೆ ಸಂಬಂಧಿ ಕಾಯಿಲೆ ಪತ್ತೆ ಮತ್ತು ಚಿಕಿತ್ಸೆಗೆ ಪ್ರತ್ಯೇಕ ವಿಭಾಗಗಳನ್ನು ತೆರೆದು ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸುವಂತೆ ಸೂಚಿಸಿದೆ.
ಉಸಿರಾಟ ತೊಂದರೆ
ನಗರದ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಎರಡು ಪ್ರಕರಣಗಳು ಪತ್ತೆಯಾದ ನಂತರ ಉಳಿದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಸಿರಾಟ ತೊಂದರೆಯಿಂದ ಬಳಲುತ್ತಿರುವವರ ಮಾಹಿತಿಯನ್ನು ಪಡೆದುಕೊಂಡಿದೆ.
ಕೆಲವು ಸಂಶಯಾಸ್ಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.