ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹನೆಯ ಕಟ್ಟೆ ಒಡೆಯುವ ಕಾಲ ಸನ್ನಿಹಿತವಾಗಿದೆ ಅನಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಅಭದ್ರತೆ, ಒಳಬೇಗುದಿ ನಿರೀಕ್ಷಿತ ಬೆಳವಣಿಗೆ, ಶಿವಕುಮಾರ್ ತಮ್ಮ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಸಹನೆ ಪ್ರದರ್ಶನ ಮಾಡುತ್ತಿದ್ದಾರೆ, ಅದು ಅವರ ಮುತ್ಸದ್ಧಿತನವೋ, ಹೈಕಮಾಂಡ್ ಸೂಚನೆಯೋ ಗೊತ್ತಿಲ್ಲ ಎಂದರು.
ಪ್ರಕ್ರಿಯೆ ಆರಂಭವಾಗಿದೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಸಹನೆಯ ಕಟ್ಟೆ ಯಾವಾಗ ಒಡೆಯುತ್ತದೆ ಎನ್ನುವುದು ಮುಖ್ಯ, ಅದರ ಪ್ರಕ್ರಿಯೆಯಂತೂ ಆರಂಭವಾಗಿದೆ, ಕಾಲ ಯಾವಾಗ ಬರುತ್ತದೆ ಕಾದು ನೋಡಬೇಕು ಎಂದರು.
ಕಾಂಗ್ರೆಸ್ ಡಿನ್ನರ್ ಮೀಟಿಂಗ್‌ಗಳು ಆಂತರಿಕ ವಿಚಾರ, ಆ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ, ಬಿಜೆಪಿಯಲ್ಲೂ ಆಗಾಗ ಒಟ್ಟಿಗೆ ಊಟ ಮಾಡುತ್ತೇವೆ, ಅದರಲ್ಲಿ ಮಹತ್ವ ಏನೂ ಇಲ್ಲ.
ಬಿಜೆಪಿಯಲ್ಲೂ ಗೊಂದಲ
ಬಿಜೆಪಿಯಲ್ಲಿನ ಗೊಂದಲಗಳ ಬಗ್ಗೆ ಪಕ್ಷದ ಹೈಕಮಾಂಡ್ ಗಮನ ಹರಿಸಿದೆ, ಈ ತಿಂಗಳಲ್ಲಿ ಸರಿ ಹೋಗಲಿದೆ, ಎಲ್ಲವೂ ಒಳ್ಳೆಯದಾಗಿ ಬಗೆಹರಿಯುವ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲೂ ಕಮೀಷನ್ ಭ್ರಷ್ಟಾಚಾರ ನಡೆಸುತ್ತಿದೆ, ಅಬಕಾರಿ, ಪಿಡಬ್ಲ್ಯುಡಿ, ನೀರಾವರಿ ಇಲಾಖೆ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ, ರಾಜ್ಯದ ಜನತೆ ರೋಸಿ ಹೋಗಿದ್ದಾರೆ.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಒಂದು ನಿವೇಶನ ಖರೀದಿಸಲಾಗದ ವಾತಾವರಣ ನಿರ್ಮಾಣಯಾಗಿದೆ.
ಕೊಳವೆಬಾವಿಗೂ ಕಮೀಷನ್
ಪರಿಶಿಷ್ಟ ಜಾತಿ, ಪಂಗಡ ಸಮುದಾಯದವರ ಕೊಳವೆಬಾವಿಗಳಿಗೂ ಕಮೀಷನ್ ಕೇಳುತ್ತಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ನಿರಾಕರಿಸಬಹುದು, ಆಡಳಿತದ ಮೇಲೆ ಹಿಡಿತ ತಪ್ಪಿರಬಹುದು ಅಥವಾ ಅವರೇ ಭಾಗಿಯಾಗಿರಬಹುದು, ಆ ಬಗ್ಗೆ ಪ್ರತಿಕ್ರಿಯಿಸಿದರೆ ಅಧಿಕಾರಕ್ಕೆ ಧಕ್ಕೆ ಬರುತ್ತದೆ ಎನ್ನುವ ಭಾವನೆ ಮೂಡಿದೆ.
ಸರ್ಕಾರದ ಒಂದೊಂದು ಇಲಾಖೆಯಲ್ಲೂ ಒಂದೊಂದು ರೀತಿಯ ಪರ್ಸೆಂಟ್ ಕಮೀಷನ್ ಇದೆ, ಇಷ್ಟೇ ಇದೆ ಅಂತ ಹೇಳಲು ಆಗುವುದಿಲ್ಲ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೂ ರಾಜ್ಯದಲ್ಲಿ ಮಿತಿಮೀರಿದ ಭ್ರಷ್ಟಾಚಾರ ಕುರಿತು ಪ್ರತಿಕ್ರಿಯಿಸಿದ್ದಾರೆ ಎಂದರು.