ಬೆಂಗಳೂರು:ಮಾರ್ಚ್ ನಂತರ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ, ನಾನಾಗೇ ಅಧಿಕಾರ ಹಸ್ತಾಂತರ ಮಾಡುತ್ತೇನೋ, ಇಲ್ಲವೇ, ಯಾವುದೋ ಕಾರಣದಿಂದ ಕೆಳಗಿಳಿಯುತ್ತೇನೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ತಾವು ಅಧಿಕಾರದಿಂದ ಕೆಳಗಿಳಿದ ನಂತರ ಮುಖ್ಯಮಂತ್ರಿ ಯಾರಾಗಬೇಕೆಂಬ ಆಯ್ಕೆ ನಿಮ್ಮದು, ಈ ಸಮಯ ಬಿಟ್ಟರೆ ನಿಮಗೆ ಮತ್ತೆ ಇಂತಹ ಅವಕಾಶ ದೊರೆಯುವುದಿಲ್ಲ ಎಂದು ತಮ್ಮ ಆಪ್ತ ಸಚಿವರಿಗೆ ತಿಳಿಸಿದ್ದಾರೆ.
ಅಧಿಕಾರದಿಂದ ಇಳಿಯುವುದು ನಿಶ್ಚಿತ
ನಾನು, ಅಧಿಕಾರದಿಂದ ಕೆಳಗಿಳಿಯುವುದು ನಿಶ್ಚಿತ, ನಿಮಗೆ ಅಧಿಕಾರ ಬೇಕೆಂದರೆ, ಯಾವ ರೂಪದಲ್ಲಾದರೂ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.
ಜಾರಕಿಹೊಳಿ ನಿವಾಸದಲ್ಲಿ ನಡೆದ ಔತಣಕೂಟದ ಸಭೆಯಲ್ಲೇ ಸಿದ್ದರಾಮಯ್ಯ, ಈ ಮಾತುಗಳನ್ನು ಆಡಿದ್ದು, ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳು ನಿಮ್ಮಗಳಲ್ಲಿದೆ.
ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಅವರ ನಡೆಗೆ ನಾನು ವಿರೋಧ ಮಾಡುವುದಿಲ್ಲ, ಆವರ ಇತ್ತೀಚಿನ ಭೇಟಿ ಸಂದರ್ಭದಲ್ಲಿ, ಸಿದ್ದರಾಮಯ್ಯ ನೀವು ಪಕ್ಷದ ಆಸ್ತಿ, ಸಮಯ ಬಂದಾಗ ಅಧಿಕಾರ ಬಿಟ್ಟುಕೊಡಿ ಎಂದಿದ್ದಾರೆ.
ಅಹಿಂದ ವರ್ಗಕ್ಕೆ ಬೆಂಬಲ
ನಾನು, ಅವರ ಮಾತಿಗೆ ತಲೆ ಬಾಗುತ್ತೇನೆ, ಆದರೆ, ಇಂತಹವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಹೇಳುವುದಿಲ್ಲ, ಅಹಿಂದ ವರ್ಗಕ್ಕೆ ಸದಾ ನನ್ನ ಬೆಂಬಲ, ಆದರೆ, ವರಿಷ್ಠರ ತೀರ್ಮಾನ ನನಗೆ ತಿಳಿಯದು.
ಈಗ ನೀವು ಒಂದಾಗಿ ಅಧಿಕಾರ ಪಡೆದುಕೊಳ್ಳಿ ಎಂದು ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಿದ ಬೆನ್ನಲ್ಲೇ ಡಾ.ಪರಮೇಶ್ವರ್ ಜನವರಿ ೮ರಂದು ಪಂಚತಾರಾ ಹೋಟೆಲ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗ ಹಾಗೂ ಮುಖ್ಯಮಂತ್ರಿ ಬೆಂಬಲಿತ ಸಚಿವರು, ಸಂಸದರು, ಶಾಸಕರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದರು.
ಇದರ ಸುಳಿವರಿತ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮೂಲಕ ಔತಣಕೂಟಕ್ಕೆ ತಡೆ ಒಡ್ಡಿದ್ದರು.
ಶಾಸಕಾಂಗ ಸಭೆ
ಅಷ್ಟೇ ಅಲ್ಲ, ಜನವರಿ 13ರಂದು ಶಾಸಕಾಂಗ ಸಭೆ ಕರೆಯುವಂತೆಯೂ ಮುಖ್ಯಮಂತ್ರಿ ಅವರಿಗೆ ಸೂಚಿಸಿದ್ದಲ್ಲದೆ, ತಾವು ಅಂದಿನ ಸಭೆಯಲ್ಲಿ ಖುದ್ದು ಹಾಜರಿರುವುದಾಗಿ ತಿಳಿಸಿದ್ದರು.
ಪಕ್ಷದ ವರಿಷ್ಠರು, ತಮಗೆ ಮುಖ್ಯಮಂತ್ರಿ ಹುದ್ದೆ ನೀಡಲು ಸಮ್ಮತಿಸಿದ್ದರೂ, ಎಸ್‌ಸಿ, ಎಸ್‌ಟಿ ಸಚಿವರುಗಳು ವಿರೋಧ ಮಾಡುತ್ತಿರುವುದರಿಂದ ಸುಗಮವಾಗಿ ಮುಖ್ಯಮಂತ್ರಿ ಪಟ್ಟ ದಕ್ಕಿಸಿಕೊಳ್ಳಲು ಶಿವಕುಮಾರ್, ತಂತ್ರಗಾರಿಕೆ ಜೊತೆಗೆ ದೇವರ ಮೊರೆ ಹೋಗಿದ್ದಾರೆ.