ಬೆಂಗಳೂರು: ‘ಮನೆಗೊಂದು ಗ್ರಂಥಾಲಯ’ ಯೋಜನೆ ಅಂಗವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಗ್ರಂಥಾಲಯ ಉದ್ಘಾಟಿಸಿ, ಕುಮಾರ ವ್ಯಾಸಭಾರತ ಕೃತಿಯ ಸಂಪುಟಗಳನ್ನು ಲೋಕಾರ್ಪಣೆ ಮಾಡಿದರು.
ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ ’ಮನೆಗೊಂದು ಗ್ರಂಥಾಲಯ’ ಯೋಜನೆಯ ಮೊದಲ ಗ್ರಂಥಾಲಯಕ್ಕೆ ಚಾಲನೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಗ್ರಂಥಾಲಯ ಫಲಕ ಅನಾವರಣಗೊಳಿಸಿದರು.
ಒಂದು ಲಕ್ಷ ಗ್ರಂಥಾಲಯ
ಮನೆಗೊಂದು ಗ್ರಂಥಾಲಯ ಯೋಜನೆಯು ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ರಾಜ್ಯಾದ್ಯಂತ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪನೆ ಗುರಿ ಹೊಂದಲಾಗಿದೆ.
ಯುವಪೀಳಿಗೆಯಲ್ಲಿ ಪುಸ್ತಕಾಭಿರುಚಿ ಬೆಳೆಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ, ಅಲ್ಲದೆ, ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿ ಉಳಿಸುವಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸಾಗಿದೆ.
ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸುವ ಇಚ್ಛೆ ಉಳ್ಳವರು ಆ ಭಾಗದ ಸಾಹಿತಿ ಅಥವಾ ಬರಹಗಾರರನ್ನು ಸಂಪರ್ಕಿಸಿ ಮನೆಗೆ ಕರೆದೊಯ್ದು, ಕಾರ್ಯಕ್ರಮ ಆಯೋಜಿಸಿದರೆ, ಕನ್ನಡ ಪುಸ್ತಕ ಪ್ರಾಧಿಕಾರದ ಪರವಾಗಿ ಪ್ರಮಾಣಪತ್ರ ನೀಡಲಾಗುತ್ತದೆ.
100 ಪುಸ್ತಕಗಳಿಂದ ಆರಂಭ
ಮನೆಯ ಒಡೆಯ 100 ಪುಸ್ತಕಗಳ ಮೂಲಕ ಗ್ರಂಥಾಲಯ ಆರಂಭಿಸಬೇಕು, ಪುಸ್ತಕಗಳ ಖರೀದಿ ಹಾಗೂ ಸುಸಜ್ಜಿತವಾಗಿಡುವ ಜವಾಬ್ದಾರಿ ಮನೆ ಮಾಲಿಕರದು.
ತಾಲ್ಲೂಕು/ಜಿಲ್ಲಾ ಮಟ್ಟದಲ್ಲಿ ಸಂಘ, ಸಂಸ್ಥೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಗ್ರಂಥಾಲಯ ಜಾಗೃತ ಸಮಿತಿ ಪ್ರೋತ್ಸಾಹ ನೀಡುವುದರ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಳ್ಳುವ ಜವಾಬ್ದಾರಿಯನ್ನೂ ಹೊಂದಿರುತ್ತದೆ.
ಕನ್ನಡ ಸಾಹಿತ್ಯ ಲೋಕದ ಅಜರಾಮರ ಕೃತಿ ’ಕುಮಾರವ್ಯಾಸ ಭಾರತ’ವನ್ನು ಓದುಗರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಒದಗಿಸುವ ಭರವಸೆ ಹಿನ್ನೆಲೆಯಲ್ಲಿ ಎರಡು ಸಂಪುಟಗಳಿಗೆ 500 ರೂ. ನಿಗದಿಪಡಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.