ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ನೆನಪಾಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಜಾತಿ ಜನಗಣತಿಗೆ ಬಿಜೆಪಿಯಿಂದಾಗಲಿ, ವೈಯಕ್ತಿಕವಾಗಿ ನನಗಾಗಲಿ ಯಾವುದೇ ತಕರಾರು ಇಲ್ಲ, ವಿರೋಧವೂ ಇಲ್ಲ, ಬಿಜೆಪಿ ಮೂಲಸಿದ್ಧಾಂತ ’ಅಂತ್ಯೋದಯ’ ಪರಿಕಲ್ಪನೆಯಾಗಿದೆ, ತಳ ಸಮುದಾಯಗಳನ್ನು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಬದ್ಧತೆಯಾಗಿದೆ, ಇದರ ಸಾಕಾರಕ್ಕೆ ಯಾವುದೇ ಪ್ರಾಮಾಣಿಕ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ.
ರಾಜಕೀಯ ಬಳಕೆಗೆ ತಕರಾರು
ರಾಜಕೀಯ ಚದುರಂಗದಾಟದಲ್ಲಿ ಜಾತಿ ಜನಗಣತಿಯನ್ನು ದಾಳವಾಗಿ ಬಳಸಿಕೊಳ್ಳುವುದಕ್ಕೆ ವಿರೋಧವಿದೆ, ರಾಜಕೀಯ ಹಾವು-ಏಣಿ ಆಟದಲ್ಲಿ ಕೆಳಗೆ ಬಿದ್ದಾಗ ಮೇಲೇಳಲು, ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿಯನ್ನ ಏಣಿಯಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ತಕರಾರಿದೆ.
ನಾಳೆ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಚರ್ಚೆಗೆ ಬರಲಿದೆ ಎಂಬ ಮಾಹಿತಿ ಇದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿಗೆ ಕೆಲವು ಪ್ರಶ್ನೆಗಳನ್ನು ಕೇಳಬಯಸುತ್ತೇನೆ ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.
ನಿಮಗೆ ನಿಜವಾಗಿಯೂ ಜಾತಿಗಣತಿಗೆ ಬದ್ಧತೆ ಇದ್ದಿದ್ದರೆ, ೨೦೧೮ರಲ್ಲೇ ಕಾಂತರಾಜು ವರದಿಯನ್ನು ಏಕೆ ಸ್ವೀಕರಿಸಿ ಜಾರಿ ಮಾಡಲಿಲ್ಲ.
ವೈಜ್ಞಾನಿಕವಾಗಿ ನಡೆದಿಲ್ಲ
ಹತ್ತು ವರ್ಷಗಳ ಹಿಂದೆ ನಡೆಸಿದ ಜಾತಿ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ, ಅನೇಕ ಜನರ ಮನೆಗಳಿಗೆ ಭೇಟಿಯೇ ನೀಡಿಲ್ಲ ಎಂಬ ದೂರುಗಳಿವೆ, ಹೀಗಿರುವಾಗ ವರದಿಯನ್ನು ಈಗ ಮುನ್ನೆಲೆಗೆ ತರುವ ತರಾತುರಿ ಏನು.
ಅವೈಜ್ಞಾನಿಕ ಜಾತಿ ಜನಗಣತಿ ವರದಿ ಸ್ವೀಕರಿಸದಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ, ಇದನ್ನು ಬೆಂಬಲಿಸಿ ಸ್ವತಃ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಸಹಿ ಮಾಡಿದ್ದಾರೆ.
ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಸಹ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಅಲ್ಲದೆ, ಅನೇಕ ಮಠಾಧೀಶರು, ಧಾರ್ಮಿಕ ಮುಖಂಡರ ವಿರೋಧವಿದೆ.
ಸಂಪುಟದಲ್ಲಿ ದಿಢೀರ್ ಚರ್ಚೆ
ಪರಿಸ್ಥಿತಿ ಹೀಗಿರುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಸಮ್ಮತ ನಿಲುವಿಗೆ ಬರುವ ಬದಲು ವರದಿಯನ್ನು ಸಂಪುಟ ಸಭೆಯಲ್ಲಿ ದಿಢೀರನೆ ಚರ್ಚೆಗೆ ಎತ್ತಿಕೊಳ್ಳುತ್ತಿರುವುದು ಯಾವ ಕಾರಣಕ್ಕಾಗಿ.
ಶಿವಕುಮಾರ್ ಅವರೊಂದಿಗಿನ ಅಧಿಕಾರ ಹಂಚಿಕೆ ಒಪ್ಪಂದ ವಿವಾದದಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿ ತಂತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಸಂಶಯವಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಅಬಕಾರಿ ಹಗರಣ, ಗುತ್ತಿಗೆದಾರರಿಂದ ಕಮಿಷನ್ ಆರೋಪ, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸರಣಿ ಆತ್ಮಹತ್ಯೆಯಂತಹ ಸಾಲು ಸಾಲು ವಿವಾದ, ಕಳಂಕಗಳ ಮುಜುಗರ ಪರಿಸ್ಥಿತಿಯಿಂದ ಜನರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ವರದಿಯನ್ನು ದಾಳವಾಗಿ ಬಳಸಲಾಗುತ್ತಿದೆಯೇ.
ಚುನಾವಣಾ ಬಳಕೆ ಹುನ್ನಾರ
ಅಥವಾ ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಜಾತಿಗಣತಿ ವರದಿ ವಿಚಾರ ಬಳಸಿಕೊಳ್ಳುವ ಹುನ್ನಾರವೇ.
ಜಾತಿಗಣತಿ ವಿಚಾರವನ್ನು ರಾಜಕೀಯವಾಗಿ ಬಳಸುವುದು ದಲಿತರಿಗೆ, ಹಿಂದುಳಿದ ವರ್ಗಗಳಿಗೆ, ತಳ ಸಮುದಾಯಗಳಿಗೆ ಮಾಡುವ ಅಪಮಾನವಲ್ಲವೇ, ಸಾಮಾಜಿಕ ನ್ಯಾಯವೆಂಬ ಪವಿತ್ರ ಪರಿಕಲ್ಪನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಆತ್ಮವಂಚನೆಯಲ್ಲವೇ.
ಜಾತಿ ಜನಗಣತಿ ವರದಿ ದತ್ತಾಂಶಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಲು ಕಾರಣವೇನು, ಸರ್ಕಾರದ ಲೋಪವೋ ಅಥವಾ ಉದ್ದೇಶಪೂರ್ವಕವಾಗಿ ಅಂಕಿ-ಅಂಶಗಳನ್ನು ಸೋರಿಕೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳ ಆತ್ಮಸಾಕ್ಷಿ ರಾಜ್ಯದ ಜನತೆಗೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.