ನವದೆಹಲಿ:ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಗುರುವಾರ ನಡೆಯುವ ಮಂತ್ರಿಮಂಡಲದಲ್ಲಿ ಮಂಡಿಸದಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಡೇ ಗಳಿಗೆಯಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ಗುರುವಾರ ಬೆಳಗ್ಗೆ ನಡೆಯಲಿರುವ ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಮಂಡಿಸುವ ವಿಷಯ ಕಲಾಪ ಪಟ್ಟಿಯಲ್ಲಿ ಸೇರ್ಪಡೆಗೊಂಡಿತ್ತು.
ದೆಹಲಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ಸಲಹೆಯಂತೆ ತಮ್ಮ ನಿರ್ಧಾರವನ್ನು ಮುಂದೂಡಿದ್ದಾರೆ.
ಸಮುದಾಯಗಳ ವಿರೋಧ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಗೆ ಒಕ್ಕಲಿಗ ಮತ್ತು ಲಿಂಗಾಯತ ಸೇರಿದಂತೆ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.
ವರದಿ ಅನುಷ್ಟಾನಗೊಂಡರೆ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಮೇಲೆ ದುಷ್ಪರಿಣಾಮ ಬೀರುವ ಜೊತೆಗೆ ಮೇಲ್ಜಾತಿಯವರನ್ನು ಪೂರ್ಣವಾಗಿ ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿದ್ದರು.
ಕಾಂಗ್ರೆಸ್ ನೂತನ ಭವನ ಉದ್ಘಾಟನೆಗೆಂದು ದೆಹಲಿಯಲ್ಲೇ ಬಿಡಾರ ಹೂಡಿದ್ದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ, ಪ್ರತ್ಯೇಕವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಪರ-ವಿರೋಧ ನಿಲುವು
ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರದೇಶ ಕಾಂಗ್ರೆಸ್ ಮತ್ತು ಸರ್ಕಾರದಲ್ಲಿ ಪರ-ವಿರೋಧ ನಿಲುವುಗಳು, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ರಣದೀಪ್ ಸಿಂಗ್ ಸುರ್ಜೇವಾಲ ವರಿಷ್ಠರಿಗೆ ವರದಿ ಸಲ್ಲಿಸಿದ್ದಾರೆ.
ಇದರ ಬೆನ್ನಲ್ಲೇ ಶಿವಕುಮಾರ್ ನಿನ್ನೆ ರಾತ್ರಿ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಗಾದಿ ಸಂಬಂಧದ ವಿವಾದ ಹಾಗೂ ಔತಣಕೂಟ ಸಭೆಗಳು ಹಾಗೂ ಸಿದ್ದರಾಮಯ್ಯ ಗುರುವಾರ ಸಂಪುಟ ಸಭೆಯಲ್ಲೇ ಶೈಕ್ಷಣಿಕ ವರದಿ ಮಂಡನೆಗೆ ಮುಂದಾಗಿರುವುದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬ ಮಾಹಿತಿಯನ್ನು ವಿವರಿಸಿದ್ದರು.
ವರದಿ ಅನುಷ್ಟಾನದಿಂದ ಪಕ್ಷದ ಮೇಲೆ ಪರಿಣಾಮ ಬೀರಲಿದೆ, ಅದರಲ್ಲಿ ಕೆಲವು ಬದಲಾವಣೆ ಮಾಡಿ ನಂತರ ಅನುಷ್ಟಾನಗೊಳಿಸಲಿ, ಆದರೆ, ತರಾತುರಿ ಬೇಡ, ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಸಲಹೆ ನೀಡುವಂತೆ ಖರ್ಗೆ ಅವರಿಗೆ ಮನವಿ ಮಾಡಿಕೊಂಡಿದ್ದರು.
ಮಧ್ಯೆಪ್ರವೇಶಿಸಲು ಮನವಿ
ತದನಂತರ ಸೋನಿಯಾ ಗಾಂಧಿ ಭೇಟಿ ಸಂದರ್ಭದಲ್ಲೂ ಶಿವಕುಮಾರ್, ಇದೇ ವಿಷಯದ ಬಗ್ಗೆ ಮಾಹಿತಿ ನೀಡಿ, ಮಧ್ಯೆಪ್ರವೇಶಿಸುವಂತೆ ಕೋರಿದ್ದರು.
ಈ ಬೆಳವಣಿಗೆ ನಂತರ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡ ಉಭಯ ನಾಯಕರು ಶೈಕ್ಷಣಿಕ ವರದಿ ಮಂಡನೆ ಮುಂದೂಡುವಂತೆ ಸಲಹೆ ಮಾಡಿದರು.
ವರಿಷ್ಠರ ಸಲಹೆಗೆ ತಲೆಬಾಗಿದ ಮುಖ್ಯಮಂತ್ರಿ ಅವರು, ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಲ್ಲದೆ, ಮಾಧ್ಯಮದ ಬಳಿಯೂ, ನಾಳಿನ ಮಂತ್ರಿಮಂಡಲ ಸಭೆಯಲ್ಲಿ, ಶೈಕ್ಷಣಿಕ ವರದಿ ಬರುತ್ತಿಲ್ಲ, ಒಂದು ವಾರದ ನಂತರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಡಾ.ಜಿ.ಪರಮೇಶ್ವರ್
ಇದರ ನಡುವೆ, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ ಎಂದಿದ್ದರು.
ವರದಿ ಕುರಿತು ಯಾವುದೇ ನಿರ್ಧಾರ ಸರ್ಕಾರದ ವಿಶೇಷಾಧಿಕಾರವಾಗಿದ್ದು, ವಿಶ್ಲೇಷಣೆ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ, ಸಮಾಜದ ಕೆಲವು ವರ್ಗಗಳು ಮತ್ತು ಆಡಳಿತಾರೂಢ ಕಾಂಗ್ರೆಸ್‌ನ ಕೆಲವರು ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವರದಿ ಅನುಷ್ಠಾನ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು, ವರದಿಯಲ್ಲಿ ಏನಿದೆ ಎಂಬುದನ್ನು ಸಾರ್ವಜನಿಕಗೊಳಿಸಬೇಕೆಂಬ ಬೇಡಿಕೆ ಇದೆ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, “ಅವೈಜ್ಞಾನಿಕ” ಎಂದು ಟೀಕಿಸಿರುವುದಲ್ಲದೆ, ಹೊಸದಾಗಿ ಸಮೀಕ್ಷೆಗೆ ಒತ್ತಾಯಿಸಿವೆ ಎಂದರು.