ವರದಿ ಕೊಡಲು ಇವರಿದ್ದಾರೆ, ತೆಗೆದುಕೊಳ್ಳಲು ಅವರಿದ್ದಾರೆ: ಡಾ.ಪರಮೇಶ್ವರ್
ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲೂ ಮುಂದುವರೆದಿರುವುದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡ ಪರಮೇಶ್ವರ್, ಒಬ್ಬರು ಒಂದು ಹುದ್ದೆ ನಿಭಾಯಿಸಿದರೆ ಆಡಳಿತ ಮತ್ತು ಪಕ್ಷ ಸಂಘಟನೆಗೆ ಸಹಕಾರಿಯಾಗುತ್ತದೆ ಎಂದರು.
ನನಗೂ ಇದೇ ಪರಿಸ್ಥಿತಿ ಬಂದಿತ್ತು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ಅಧ್ಯಕ್ಷ ಸ್ಥಾನ ಹಾಗೂ ಎರಡು ದೊಡ್ಡ ಸಚಿವ ಖಾತೆಗಳಿರುವುದರಿಂದ ಅವುಗಳನ್ನು ಬದಲಾಯಿಸಿ, ಬೇರೆಯವರನ್ನು ನೇಮಿಸಬೇಕು ಅಂತ ಕೇಳುತ್ತಾರೆ, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ನನಗೂ ಇದೇ ಪರಿಸ್ಥಿತಿ ಬಂದಿತ್ತು.
ಸಚಿವ ಸತೀಶ್ ಜಾರಕಿಹೊಳಿ ಅವರು, ಸುರ್ಜೇವಾಲಾ ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಒತ್ತಾಯ ಮಾಡಿದ್ದು ನಿಜ, ಮುಖ್ಯಮಂತ್ರಿ ಆಯ್ಕೆ ಸಂದರ್ಭದಲ್ಲಿ ಲೋಕಸಭಾ ಚುನಾವಣೆವರೆಗೆ ಅಧ್ಯಕ್ಷರಾಗಿ ಮುಂದುವರೆಯಲು ಶಿವಕುಮಾರ್ ಅವರಿಗೆ ಎಐಸಿಸಿ ನಾಯಕರು ಹೇಳಿದ್ದರು, ಇದನ್ನು ನೆನಪಿಸಲು ಹೋಗಿರುವುದಾಗಿ ಸತೀಶ್ ಹೇಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಅಧ್ಯಕ್ಷನಾಗಿ ಮುಂದುವರೆದೆ
ನಾನು ಕೆಪಿಸಿಸಿ ಅಧ್ಯಕ್ಷ ಮತ್ತು ಸಚಿವನಾಗಿದ್ದಾಗ ಮಂತ್ರಿ ಸ್ಥಾನ ಆಯ್ಕೆ ಮಾಡಿಕೊಳ್ಳಿ ಅಥವಾ ಅಧ್ಯಕ್ಷರಾಗಿಯಾದರೂ ಮುಂದುವರೆಯಿರಿ ಎಂಬುದಾಗಿ ಹೈಕಮಾಂಡ್ ಹೇಳಿತ್ತು, ಆಗ ಪಕ್ಷ ಸಂಘಟನೆಗೆ ಪ್ರಾಮುಖ್ಯತೆ ಕೊಟ್ಟು, ನಾನು ಅಧ್ಯಕ್ಷನಾಗಿ ಮುಂದುವರೆಯುವುದಾಗಿ ಹೇಳಿ, ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ.
ಪಕ್ಷ ಸಂಘಟನೆ ಸಂಪೂರ್ಣ ಸ್ಥಗಿತಗೊಂಡಿದೆ, ಕಾಂಗ್ರೆಸ್ ಸರ್ಕಾರ ಬಂದ ನಂತರ ಪಕ್ಷದ ಕೆಲಸಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದನ್ನು ಹೈಕಮಾಂಡ್ ಗಮನಿಸುತ್ತದೆ, ಒಂದು ಸಮುದಾಯ ಸೇರಿ ಸಭೆ ಮಾಡುವುದನ್ನು ಗಮನಿಸಿರಬೇಕಲ್ಲವೆ, ಪಕ್ಷ ಸಂಘಟನೆ ದೊಡ್ಡ ಜವಾಬ್ದಾರಿ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ನೋಡಬೇಕು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಸಚಿವರ ಹೆಸರು ಉಲ್ಲೇಖಿಸಿ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ, ವರದಿ ಕೊಡುವವರನ್ನು ಯಾರು ಬೇಡ ಅನ್ನುತ್ತಾರೆ, ವರದಿ ತೆಗೆದುಕೊಳ್ಳಲು ಅವರಿದ್ದಾರೆ, ಕೊಡಲು ಇವರಿದ್ದಾರೆ ಎಂದರು.