ಮಂಗಳೂರು::ಬಿಪಿಎಲ್ ಪಡಿತರದಾರರ ಕುಟುಂಬದ ಸದಸ್ಯರಿಗೆ ಇನ್ನು ಮುಂದೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಕಲ್ಪಿಸುವಂತೆ ಆದೇಶ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಡಿತರ ಚೀಟಿ ಇದ್ದವರಿಗೆ ಎಲ್ಲಾ ರೀತಿಯ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಬೇಕೆನ್ನುವ ಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ.
ಎಪಿಎಲ್ ಪಡಿತರದಾರರಿಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಕಲ್ಪಿಸುವಂತೆ ಸೂಚಿಸಲಾಗಿದೆ, ಅವರ ಕುಟುಂಬದ ಆರ್ಥಿಕ ಸಾಮರ್ಥ್ಯ ಗಮನದಲ್ಲಿಟ್ಟುಕೊಂಡು ದರ ನಿಗದಿ ಮಾಡಬೇಕು ಎಂದರು.
ನುರಿತ ವೈದ್ಯರ ತಂಡ
ಬಡವರಿಗೂ ದೊಡ್ಡ ಕಾಯಿಲೆಗಳು ಬರುತ್ತವೆ, ಕಿಡ್ನಿ ಕಸಿ ಚಿಕಿತ್ಸೆಗಾಗಿ ಐದು ಸಾವಿರ ರೋಗಿಗಳು ಸರದಿಯಲ್ಲಿದ್ದಾರೆ, ದಾನಿಗಳು ದೊರೆತರೆ ನಿತ್ಯ ಕಿಡ್ನಿ ಕಸಿ ಮಾಡುವ ನುರಿತ ವೈದ್ಯರ ತಂಡ ನಮ್ಮಲ್ಲಿದೆ ಎಂದರು.
ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾಂರಂಭಿಸಬೇಕೆಂಬುದು ನಮ್ಮ ಗುರಿ, ಖಾಸಗಿ ವೈದ್ಯಕೀಯ ಆಸ್ಪತ್ರೆಗಳಿದ್ದರೂ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಹಂತ ಹಂತವಾಗಿ ಎಲ್ಲೆಡೆ ತೆರೆಯಲಾಗುವುದು.
ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ಶುಚಿತ್ವ, ನಿರ್ವಹಣೆ ಕಾಪಾಡುವ ಜೊತೆಗೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲೂ ಸಿಗುವಂತಾಗಬೇಕು.
ಕಾರ್ಯಕ್ರಮ ರೂಪಿಸಿ
ಶ್ರೀಮಂತರು, ನಮ್ಮಂತಹ ರಾಜಕಾರಣಿಗಳು ಸರ್ಕಾರಿ ಆಸ್ಪತ್ರೆಗೆ ಬರುವಂತಾಗಬೇಕೆಂಬ ದಿಕ್ಕಿನಲ್ಲಿ ಕಾರ್ಯಕ್ರಮ ರೂಪಿಸಿ ಎಂದು ಸೂಚಿಸಿರುವುದಾಗಿ ರಾಜೀವ್ ಗಾಂಧಿ ಆರೋಗ್ಯ ವಿವಿಯ ಪ್ರಾದೇಶಿಕ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ತಿಳಿಸಿದರು.
ಸಮಾಜದ ಎಲ್ಲ ವರ್ಗಕ್ಕೂ ಗುಣಮಟ್ಟದ ವೈದ್ಯಕೀಯ ಸೇವೆ ದೊರಕಿಸುವ ದಿಕ್ಕಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ರಾಜೀವ್ ಗಾಂಧಿ ವಿಶ್ವವಿದ್ಯಾಲಯ, ಏಷ್ಯಾದ ಅತ್ಯಂತ ದೊಡ್ಡ ಆರೋಗ್ಯ ವಿವಿಯಾಗಿದ್ದು, ಮೂರೂವರೆ ಲಕ್ಷ ವೈದ್ಯ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ.
ಆರೋಗ್ಯ ಸೇವೆ ಜನರಿಗೆ ಸರಳವಾಗಿ ಸಿಗುವಲ್ಲಿ ಸಂಶೋಧನೆಗಳನ್ನು ಹೆಚ್ಚೆಚ್ಚು ನಡೆಸಬೇಕು, ದೇಶದ ಅತ್ಯುತ್ತಮ ಆರೋಗ್ಯ ಸೇವೆ ಬಡವರಿಗೂ ಸುಲಭವಾಗಿ ಸಿಗುವಂತೆ ಮಾಡಬೇಕು ಎಂದು ಕರೆ ನೀಡಿದರು.
ವೈದ್ಯಕೀಯ ಡಿಪ್ಲೊಮಾ ಮತ್ತು ಇತರೆ ಕೋರ್ಸ್‌ಗಳ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ, ವೈದ್ಯ ವಿಜ್ಞಾನ ಪದವೀಧರರೂ ಯುವನಿಧಿಗೆ ಅರ್ಹತೆ ಗಳಿಸಿದ್ದಾರೆ, ವೈದ್ಯ ವಿದ್ಯಾರ್ಥಿಗಳು ಇತರೆ ಕ್ಷೇತ್ರಗಳಿಗೆ ವಲಸೆ ಹೋಗದೆ ಆರೋಗ್ಯ ಕ್ಷೇತ್ರದಲ್ಲೇ ತಮ್ಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.