ಬೆಂಗಳೂರು:ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳ ಅನುದಾನವನ್ನು ಬಳಸಿಕೊಳ್ಳುವಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇಂದಿಲ್ಲಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಸಮನಾಗಿ ನೋಡಿ, ಒಕ್ಕೂಟ ನಿಯಮ ಪಾಲನೆ ಮಾಡಿದೆ ಎಂದು ಸಮರ್ಥಿಸಿಕೊಂಡರು.
ಕೇಂದ್ರದ ಯೋಜನೆಗಳನ್ನು ಕರ್ನಾಟಕಕ್ಕೆ ನೀಡುವಲ್ಲಿ ತಾರತಮ್ಯ ಎಸಗಿಲ್ಲ, ಇವರು ಕೇಳದಿದ್ದರೂ ನಾವು ಕೊಟ್ಟಿದ್ದೇವೆ.
ಮೂಲಸೌಕರ್ಯ ವೃದ್ಧಿಗೆ ಒತ್ತು
ಸಾರ್ವಜನಕರಿಗೆ ಅನುಕೂಲ ಮಾಡುವಲ್ಲಿ, ರಾಜ್ಯ ಮತ್ತು ರಾಷ್ಟ್ರದ ಮೂಲಸೌಕರ್ಯ ವೃದ್ಧಿಗೆ ಒತ್ತು ನೀಡುವ ಕಾರ್ಯಕ್ರಮಗಳನ್ನು ನೀಡಿದರೂ ಅನುಷ್ಟಾನ ಮಾಡದಿದ್ದರೆ ನಾವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ನಾವು ಕೆಲವು ಪ್ರಮುಖ ಯೋಜನೆಗಳನ್ನು ನೀಡಿದ್ದೇವೆ, ಅವುಗಳಿಗೆ ರಾಜ್ಯ ಸರ್ಕಾರ ಸರಿಸಮನಾದ ಹಣ ನೀಡದೆ ಬಳಕೆಯನ್ನೇ ಮಾಡಿಕೊಂಡಿಲ್ಲ.
ಸರ್ಕಾರದ ಇಂತಹ ನಿರ್ಧಾರಗಳು ರಾಜ್ಯದ ಜನತೆಗೆ ದ್ರೋಹ ಬಗೆದಂತಾಗುತ್ತದೆ, ಅವರುಗಳು ದಕ್ಕಬೇಕಾದ ಸೌಲತ್ತುಗಳಿಂದ ವಂಚಿತರಾಗುತ್ತಾರೆ.
ರಾಜಕೀಯವಾಗಿ ನೋಡಬಾರದು
ನಾವು ಎಲ್ಲವನ್ನೂ ರಾಜಕೀಯವಾಗಿ ನೋಡಬಾರದು, ಮೊದಲು ಅಭಿವೃದ್ಧಿ ನಂತರ ಉಳಿದ ವಿಚಾರ.
ಕರ್ನಾಟಕ ಸರ್ಕಾರಕ್ಕೆ ಆರೋಪಗಳನ್ನು ಮಾಡುವ ಕಡೆ ಹೆಚ್ಚು ಒಲವು ಇದ್ದಂತಿದೆ, ನಾವು ನೀಡಿದ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ, ಆರೋಪದಲ್ಲೇ ನಿರತವಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕರ್ನಾಟಕಕ್ಕೆ ನಷ್ಟ ಅಥವಾ ಕೊರತೆ ಎದುರಾಗಬಾರದು ಎನ್ನುವ ದೃಷ್ಟಿಯಿಂದ ಕೇಂದ್ರ ಹಲವಾರು ಯೋಜನೆಗಳನ್ನು ನೀಡಿದೆ ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಜಿಲ್ಲಾ ಮಟ್ಟದ ಅಧ್ಯಕ್ಷರುಗಳ ಆಯ್ಕೆ ನಂತರ ಅವರುಗಳು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ, ಈಗಾಗಲೇ ಚುನಾವಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದರು.