ಬೆಂಗಳೂರು:ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.
ಮುಖ್ಯಮಂತ್ರಿಯಾಗಲಿ ಅಥವಾ ಅವರ ಧರ್ಮ ಪತ್ನಿಯವರಾಗಲಿ ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ, ಅವರನ್ನು ರಾಜಕೀಯವಾಗಿ ಮುಗಿಸಲು ಕಾಣದ ಕೈಗಳು ಹುನ್ನಾರ ನಡೆಸುತ್ತಿವೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.), ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಸೇರಿದ ೩೦೦ ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟಗೋಲು ಹಾಕಿಕೊಂಡಿದೆ ಎಂಬ ಹಿನ್ನೆಲೆಯಲ್ಲಿ ಶಿವಕುಮಾರ್, ತಮ್ಮ ನಾಯಕನ ಪರ ಬ್ಯಾಟಿಂಗ್ ಮಾಡಿದ್ದಾರೆ.
ತನಿಖೆ ಸುದೀರ್ಘ ಪ್ರಕ್ರಿಯೆ
ಒಂದು ಪ್ರಕರಣವೆಂದರೆ, ಅದರ ತನಿಖೆ ಸುದೀರ್ಘ ಪ್ರಕ್ರಿಯೆಯಾಗಿರುತ್ತದೆ, ಇಲ್ಲಿ ಅಕ್ರಮ ನಡೆದಿದೆಯೇ ಇಲ್ಲವೇ ಎಂಬ ಕುರಿತು ನ್ಯಾಯಾಲಯ ವಿಚಾರಣೆ ಮಾಡಬೇಕೇ ಹೊರತು ನೀವು, ನಾವು ವಿಚಾರಣೆ ಮಾಡುವಂತಹದ್ದಲ್ಲ.
ನಾನು, ಇ.ಡಿ. ತನಿಖೆ ನೋಡಿದ್ದೇನೆ, ಅನುಭವಿಸಿದ್ದೇನೆ, ಈ ಪ್ರಕರಣದ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ, ಒಟ್ಟಾರೆ, ಸಿದ್ದರಾಮಯ್ಯ ಕುಟುಂಬವನ್ನು ಮುಗಿಸುವ ಒಂದು ಕಾರ್ಯಯೋಜಿತ ತಂತ್ರಗಾರಿಕೆ ಇದಾಗಿದೆ ಎಂದರು.
ಗಾಂಧಿ ಪ್ರತಿಮೆ ಅನಾವರಣ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಭಾರತ ಸರ್ಕಾರಿ ಕಾರ್ಯಕ್ರಮವಾಗಿದೆ, ಮುಖ್ಯಮಂತ್ರಿ ಅಧ್ಯಕ್ಷತೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತಿಯಲ್ಲಿ ಸುವರ್ಣಸೌಧ ಗಾಂಧಿ ಪ್ರತಿಮೆ ಅನಾವರಣ ಮಾಡಲಾಗುವುದು ಎಂದರು.
ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಎಲ್ಲಾ ಪಕ್ಷದ ಶಾಸಕರಿಗೂ ಆಹ್ವಾನ ನೀಡಲಾಗಿದೆ.
ಶಾಸಕರ ಹೊರತಾಗಿ ಗಂಗಾಧರ ದೇಶಪಾಂಡೆ ಕುಟುಂಬ ಸೇರಿದಂತೆ ಪ್ರಮುಖ ಕುಟುಂಬದವರಿಗೂ ಆಹ್ವಾನ ನೀಡಲಾಗುವುದು ಎಂದರು.