ಬೆಳಗಾವಿ:ಕಾಂಗ್ರೆಸ್‌ನಲ್ಲಿ ಯಾವ ಬಂಡಾಯವೂ ಇಲ್ಲ, ಯಾರ ಜೊತೆಯೂ ವೈಯಕ್ತಿಕ ಭಿನ್ನಾಭಿಪ್ರಾಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಪಕ್ಷ ಉಳಿಸುವುದು, ಸರ್ಕಾರ ಭದ್ರವಾಗಿಡುವುದೇ ನನ್ನ ಕರ್ತವ್ಯ, ಇದರ ಹೊರತಾಗಿ ನನಗೆ ಬೇರೆ ಯಾವುದೇ ಕರ್ತವ್ಯಗಳಿಲ್ಲ, ಕಾರ್ಯಕರ್ತರ ರಕ್ಷಣೆ ನನ್ನ ಮೊದಲ ಕರ್ತವ್ಯ, ನಾನು ನನ್ನ ಕೆಲಸ ಮಾಡುತ್ತಿದ್ದೇನೆ, ಯಾರೋ ಹೇಳಿದ ಸುಳ್ಳನ್ನು ಮಾಧ್ಯಮದವರು ನಂಬಬಾರದು, ಪಕ್ಷದಲ್ಲಿ ಬಂಡಾಯವಿದೆ ಎಂದೆಲ್ಲಾ ಹೇಳಬೇಡಿ.
ನಾನು ಎಲ್ಲರನ್ನು ಸಮಾನವಾಗಿ ಕಾಣುವ ಅಧ್ಯಕ್ಷ ಸ್ಥಾನದಲ್ಲಿದ್ದು, ನನಗೆ ಎಲ್ಲರೂ ಒಂದೇ, ಎಲ್ಲರನ್ನು ಸರಿ ಸಮಾನವಾಗಿ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ.
ಸುರ್ಜೇವಾಲಾ ಬದಲಾವಣೆ ಸುಳ್ಳು ಮಾಹಿತಿ
ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬದಲಾವಣೆಗೆ ಕೆಲವು ಸಚಿವರು ಅಧಿನಾಯಕ ರಾಹುಲ್ ಗಾಂಧಿಗೆ ದೂರು ನೀಡುತ್ತಿದ್ದಾರೆಂಬುದು ಸುಳ್ಳು ಮಾಹಿತಿ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಶಕ್ತಿ ತುಂಬಲು ಅನೇಕ ಹೋರಾಟ ಮಾಡಿದ್ದೇನೆ, ಪಕ್ಷಕ್ಕಾಗಿ ಹಲವು ತ್ಯಾಗ ಮಾಡಿದ್ದೇನೆ, ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿಯೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ, ನನಗೆ ಪಕ್ಷವೇ ಮುಖ್ಯ, ನಾನು ಪಕ್ಷದಿಂದ ಬೆಳೆದವನು, ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತ್ತು.
ನಾನು ತ್ಯಾಗ ಮಾಡಿಕೊಂಡೆ ಬರುತ್ತೇನೆ, ನನಗೆ ಫಲದ ಅವಶ್ಯಕತೆಯೇ ಇಲ್ಲ, ಜನಕ್ಕೆ ಒಳ್ಳೆಯದಾಗುತ್ತಿದೆಯಲ್ಲ, ಅಷ್ಟು ಸಾಕು ಎಂದರು.
ಪ್ಲಾಂಟ್ ಮಾಡಿದ ಸ್ಟೋರಿ
ಫಿರೋಜ್ ಸೇಠ್ ಪಕ್ಷದ ಹಿರಿಯ ನಾಯಕರು, ನನ್ನ ಜೊತೆ ಶಾಸಕರಾಗಿ ಕೆಲಸ ಮಾಡಿದ್ದಾರೆ, ಬೆಳಗಾವಿ ಸಮಾವೇಶ ಸಮಿತಿ ಸದಸ್ಯರಾದ ಅವರನ್ನು ಸಂಘಟನೆ ದೃಷ್ಟಿಯಿಂದ ಜಿಲ್ಲಾಧ್ಯಕ್ಷರ ಜೊತೆ ಭೇಟಿ ಮಾಡಿದ್ದೆ, ಯಾರೋ ಸ್ಟೋರಿ ಪ್ಲಾಂಟ್ ಮಾಡಿದ್ದನ್ನು ನಂಬಿ ಮಾಧ್ಯಮಗಳು ಏನೇನೋ ವರದಿ ಬಿತ್ತರ ಮಾಡಿದವು.
2023ರ ಚುನಾವಣೆಯಲ್ಲಿ ಫಿರೋಜ್ ಸೇಠ್‌ಗೆ ಟಿಕೆಟ್ ಸಿಗದಿದ್ದಕ್ಕೆ ಸತೀಶ್ ಜಾರಕಿಹೊಳಿ ಕಾರಣ ಎಂಬ ವಿಚಾರ ಗೊತ್ತಿಲ್ಲ, ನನಗೆ ಎಲ್ಲರೂ ಒಂದೇ, ಕಾರ್ಯಕರ್ತರು, ಶಾಸಕರು, ಸಚಿವರು ಎಲ್ಲರೂ ಒಂದೇ, ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರ ಎದುರು ತಲೆಬಾಗಿ ಅವರ ಸೇವೆ ಮಾಡುತ್ತೇನೆ, ನನಗೆ ಪಕ್ಷವೇ ಮುಖ್ಯ, ನನಗೆ ಕೊಟ್ಟಿರುವ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಕಾಲ, ಕಾಲದಿಂದಲೂ ನಿರ್ವಹಿಸಿಕೊಂಡು ಬಂದಿದ್ದೇನೆ.
ಕಾಂಗ್ರೆಸ್‌ನ 60 ಶಾಸಕರು ಬಿಜೆಪಿಗೆ ಬರುತ್ತಾರೆಂಬ ಯತ್ನಾಳ್ ಹೇಳಿಕೆ ನೀಚ ರಾಜಕಾರಣ, ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, ಯಾರು ಏನೇ ಹೇಳಿದ್ದರೂ ಅದೆಲ್ಲಾ ಸುಳ್ಳಿನ ಕಂತೆ ಎಂದರು.
ಸಾಮಾಜಿಕ ನ್ಯಾಯ ಮೂಲ ಮಂತ್ರ
ಮಹಾತ್ಮ ಗಾಂಧಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮರಣೆ, ಸಂವಿಧಾನ ರಕ್ಷಣೆಯೇ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಉದ್ದೇಶ, ಸಾಮಾಜಿಕ ನ್ಯಾಯ ಉಳಿಸುವುದೇ ನಮ್ಮ ಮೂಲ ಮಂತ್ರ, ಕಳೆದ ಬಾರಿ ರೂಪಿಸಿದ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದುವರೆಸಲಾಗುವುದು.
ಸುಮಾರು 60ಕ್ಕೂ ಹೆಚ್ಚು ರಾಷ್ಟ್ರೀಯ ಮಟ್ಟದ ನಾಯಕರು, ಅತಿಥಿಗಳು, ಸಂಸದರು, ಕಾರ್ಯಕಾರಿ ಸಮಿತಿ ಸದಸ್ಯರು ಬೆಳಗಾವಿ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ, ಸಚಿವರು, ಶಾಸಕರು, ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಒಂದಷ್ಟು ನಾಯಕರಿಗೆ ಮುಖ್ಯ ವೇದಿಕೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.
ದೆಹಲಿ ವಿಧಾನಸಭಾ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನೇ ಖುದ್ದಾಗಿ ದೆಹಲಿಗೆ ಹೋಗಿ ಮಹಿಳೆಯರಿಗೆ ತಿಂಗಳಿಗೆ 2,500 ರೂ. ನೀಡುವ ’ಪ್ಯಾರಿ ದೀದಿ’ ಯೋಜನೆ ಪ್ರಕಟಣೆ ಮಾಡಿದ್ದೆ.
ಸಿದ್ದರಾಮಯ್ಯ ರಾಜ್ಯ ಬಜೆಟ್ ತಯಾರಿಯಲ್ಲಿದ್ದಾರೆ, ಎಲ್ಲಾ ಮಂತ್ರಿಗಳು, ಇಲಾಖಾ ಅಧಿಕಾರಿಗಳ ಜೊತೆ ಚರ್ಚೆ ನಡೆಸಬೇಕಿದೆ, ಈ ಹಿನ್ನೆಲೆಯಲ್ಲಿ ದೆಹಲಿ ಚುನಾವಣಾ ಪ್ರಚಾರದಿಂದ ಅವರಿಗೆ ಎಐಸಿಸಿ ಸಮಯ ನೀಡಿದೆ ಎಂದರು.