ಬೆಳಗಾವಿ:ಮಹಿಳೆಯರ ಮೇಲೆ ಬಲಾತ್ಕಾರದಂತಹ ಹೀನ ಕೃತ್ಯ ನಡೆಸುವ ಸಮಾಜಘಾತಕ ಶಕ್ತಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ರಕ್ಷಣೆ ದೊರಕಬೇಕು, ಈ ದಿಸೆಯಲ್ಲಿ ಸರ್ಕಾರ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ರಾಹುಲ್ ಗಾಂಧಿಗೆ ಅನಾರೋಗ್ಯ
ಅನಾರೋಗ್ಯ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿ ಅಧಿವೇಶನಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ಆದರೆ, ಕೆಲವು ಮಾಧ್ಯಮಗಳು ಸಮಾವೇಶದಿಂದ ದೂರ ಉಳಿದಿದ್ದಾರೆಂಬುದಾಗಿ ಸುದ್ದಿ ತಿರುಚಿ ವರದಿ ಮಾಡುತ್ತಿವೆ, ಇದರಿಂದ ಏನು ಸಂದೇಶ ಹೋಗುತ್ತದೆ, ಪತ್ರಿಕಾವೃತ್ತಿ ಘನತೆ ಉಳಿಯುವುದೇ ಎಂದು ಪ್ರಶ್ನಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದೆ ಪ್ರಿಯಾಂಕಾ ಗಾಂಧಿ, ಕಾರ್ಯಕಾರಿ ಸಮಿತಿ ಸದಸ್ಯರು, ಕಾರ್ಯದರ್ಶಿಗಳು ಸಮಾವೇಶಕ್ಕೆ ಆಗಮಿಸಿದ್ದಾರೆ ಎಂದರು.
ಸೌಹಾರ್ದತೆ, ಸಮಾನತೆ
ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಬರಬೇಕು, ಅಸ್ಪೃಶ್ಯತೆ ಹೋಗಲಾಡಿಸಬೇಕು ಮತ್ತು ಮಹಿಳೆಯರ ಸ್ವಾತಂತ್ರ್ಯ, ಹಕ್ಕುಗಳ ರಕ್ಷಣೆಯಾಗಬೇಕು ಎಂಬುದನ್ನು ಮಹಾತ್ಮ ಗಾಂಧಿ ಪ್ರತಿಪಾದಿಸಿದ್ದರು.
ಸಮಾಜ ಸುಧಾರಕ ಬಸವಣ್ಣ, ಕನಕದಾಸರ ವಿಚಾರಗಳು ಭಾರತೀಯ ಸಂವಿಧಾನದಲ್ಲಿ ಅಡಕವಾಗಿವೆ, ಗಾಂಧಿ ತತ್ವಾದರ್ಶ ಪುನರ್ ಸ್ಥಾಪಿಸಲು ವರ್ಷವಿಡೀ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನ ಆಚರಿಸಲಾಗುವುದು, ಗಾಂಧಿ ಹಾಗೂ ಅವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಇಂದಿಗೂ ಪ್ರಸ್ತುತವಾಗಿವೆ.
ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಸುವ ಅನಾಹುತಕಾರಿ ರಾಜಕಾರಣ ದೇಶದಲ್ಲಿ ನಡೆಯುತ್ತಿದೆ, ಇವುಗಳ ರಕ್ಷಣೆ ಕಾಂಗ್ರೆಸ್ ಜವಾಬ್ದಾರಿಯಾಗಿದೆ, ಪಕ್ಷ ಸಂವಿಧಾನ ಪರವಾಗಿದೆ, ವಿರೋಧಿಗಳು ಮನುವಾದದ ಪರವಾಗಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಗೋಡ್ಸೆ ಸಿದ್ಧಾಂತ ಪಾಲನೆ
ನಂತರ ಗಾಂಧಿ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಮ ಭಕ್ತ ಹಾಗೂ ಅತ್ಯುತ್ತಮ ಹಿಂದೂ ಆಗಿದ್ದರು, ಅವರನ್ನು ಬಿಜೆಪಿ ಪರಿವಾರದ ಗೋಡ್ಸೆ ಹತ್ಯೆ ಮಾಡಿದ, ನಾವು ಮಹಾತ್ಮಗಾಂಧಿಯ ಹಿಂದೂತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ, ಬಿಜೆಪಿ ಪರಿವಾರ ಕೊಲೆಗಡುಕ ಗೋಡ್ಸೆ ಸಿದ್ಧಾಂತವನ್ನು ಪಾಲಿಸುತ್ತಿದೆ ಎಂದರು ಆರೋಪಿಸಿದರು.
ಗಾಂಧಿ ಹಿಂದೂತ್ವ ಹಾಗೂ ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ, ಅಂಬೇಡ್ಕರ್ ದ್ವೇಷಿಯೂ ಆಗಿದೆ.
ಮಹಾತ್ಮಗಾಂಧಿ ವಿಚಾರಗಳನ್ನು ಮುಂದಿನ ಪೀಳಿಗೆಗೆ ಇನ್ನಷ್ಟು ಅರ್ಥಪೂರ್ಣವಾಗಿ ತಲುಪಿಸುವ, ಗಾಂಧಿ ಗ್ರಾಮ ಸ್ವರಾಜ್ಯ ಕನಸು ನನಸು ಮಾಡುವ ಗುರಿಯೊಂದಿಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನ ಮುನ್ನಡೆಸುತ್ತೇವೆ.
ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮಗಾಂಧಿ, ಆ ದಿನ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಈ ನೆಲದಲ್ಲಿ ಹೆಚ್ಚಿಸಿದರು ಎಂದರು.