ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಎಐಸಿಸಿ ವರಿಷ್ಠರ ಸ್ಪಷ್ಟ ನುಡಿ
ಬೆಂಗಳೂರು:ನಾಯಕತ್ವ ಮತ್ತು ಪಕ್ಷ ಸಂಘಟನೆಗೆ ಅಪಸ್ವರ ಎತ್ತುವ ಒಂದಿಬ್ಬರು ಸಚಿವರನ್ನು ಸಂಪುಟದಿಂದ ಕೈಬಿಡಿ ಎಂದು ಎಐಸಿಸಿ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರುಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಸಮಾವೇಶದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲೇ ಪಕ್ಷದ ರಾಜಕೀಯ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಖಡಕ್ಕಾಗಿ ಈ ವಿಷಯ ತಿಳಿಸಿದ್ದಾರೆ.
ವೇಣುಗೋಪಾಲ್ ಮಾತಿನ ವೇಳೆ ಮಧ್ಯೆ ಪ್ರವೇಶಿಸಿದ ಖರ್ಗೆ, ಪರೀಕ್ಷೆ ಬರೆಯದವರನ್ನು ನಾವು ಪಾಸು ಮಾಡಲು ಸಾಧ್ಯವಿಲ್ಲ.
ಪರೀಕ್ಷೆ ಬರೆದವರಿಗೆ ಹುದ್ದೆ
ಪರೀಕ್ಷೆ ಬರೆದವರಿಗೆ ಹುದ್ದೆ ದೊರೆಯುತ್ತದೆ, ಏನೂ ಮಾಡದೆ, ಅಧಿಕಾರ ಬೇಕು ಎಂದರೆ, ನಮ್ಮಲ್ಲಿ ದೊರೆಯದು, ಒಂದಿಬ್ಬರನ್ನು ಕಿತ್ತಾಕಿ, ಎಲ್ಲವೂ ಸರಿಹೋಗುತ್ತೆ, ಅವರಿಂದ ಪಕ್ಷ ಮತ್ತು ಸರ್ಕಾರಕ್ಕೆ ಏನೂ ಆಗದು ಎಂದು ಖಾರವಾಗಿ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ವೇಣುಗೋಪಾಲ್, ಹಣಕಾಸು ಖಾತೆಯನ್ನೂ ಹೊಂದಿರುವ ಸಿದ್ದರಾಮಯ್ಯ, ವಿಧಾನಮಂಡಲದಲ್ಲಿ 2025-26ನೇ ಸಾಲಿನ ಮುಂಗಡಪತ್ರ ಮಂಡಿಸಿ ಅನುಮತಿ ಪಡೆದುಕೊಳ್ಳುವವರೆಗೂ ಕರ್ನಾಟಕದ ಮಟ್ಟಿಗೆ ಯಾವುದೇ ರಾಜಕೀಯ ನಿರ್ಧಾರಗಳನ್ನು ಪಕ್ಷ ತೆಗೆದುಕೊಳ್ಳುವುದಿಲ್ಲ ಎಂದರು.
ಸಚಿವರು, ಮುಖಂಡರಲ್ಲಿ ನಾಯಕರ ಬಗ್ಗೆ ಅಸಮಾಧಾನ ಇದ್ದಲ್ಲಿ, ಅದನ್ನು ವರಿಷ್ಠರ ಮುಂದೆ ತೋಡಿಕೊಳ್ಳಲಿ, ಅದು ಬಿಟ್ಟು ಬಹಿರಂಗ ಹೇಳಿಕೆ ನೀಡಿದರೆ ಇನ್ನು ಮುಂದೆ ನಾವು ಸಹಿಸುವುದಿಲ್ಲ.
ಮೂರ‍್ನಾಲ್ಕು ಸಚಿವರ ಹೇಳಿಕೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಮೂರ‍್ನಾಲ್ಕು ಸಚಿವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಖುದ್ದಾಗಿ, ಇವರನ್ನು ಭೇಟಿ ಮಾಡಿ, ಇಲ್ಲವೇ ಸಂಪರ್ಕಿಸಿ, ವರಿಷ್ಠರ ನಿಲುವು ಏನೆಂಬುದನ್ನು ತಿಳಿಸಿದ್ದಾರೆ.
ಉಸ್ತುವಾರಿಗಳ ಮಾತಿಗೂ ಮನ್ನಣೆ ನೀಡದೆ, ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಪಸ್ವರ ಎತ್ತಿರುವ ಇಬ್ಬರು ಸಚಿವರನ್ನು ಸಂಪುಟದಿಂದ ಕಿತ್ತೊಗೆಯಿರಿ ಎಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಗೆ ವೇಣುಗೋಪಾಲ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ವರಿಷ್ಠರ ಸಂದೇಶ
ಸುರ್ಜೇವಾಲಾ ಅವರು, ಅಪಸ್ವರ ಎತ್ತಿರುವ ಬಗ್ಗೆ ಸಮಾಲೋಚನೆಗೆ ಬರುವ ಸಮಯದಲ್ಲೇ ವರಿಷ್ಠರು ಈ ಸಂದೇಶವನ್ನು ನೀಡಿಯೇ ಕಳುಹಿಸಿದ್ದರು.
ಇದಾದ ನಂತರವೂ ಅವರುಗಳು ಅದನ್ನೇ ಮುಂದುವರೆಸಿದ್ದಾರೆ, ಇಂತಹವರು ಅಧಿಕಾರದಲ್ಲಿ ಇರುವುದು ಬೇಡ, ಅವರಿಲ್ಲದೆ ಪಕ್ಷ ನೆಲ ಕಚ್ಚುವುದಿಲ್ಲ.
ಕರ್ನಾಟಕದ ಮಟ್ಟಿಗೆ ಸಂಘನಾತ್ಮಕವಾಗಿ ಪಕ್ಷ ಮತ್ತು ಸರ್ಕಾರ ಬಲಿಷ್ಠವಾಗಿದೆ, ಹೀಗಾಗಿ ನೀವು ಯಾವುದೇ ಮುಲಾಜಿಗೆ ಒಳಗಾಗಬೇಡಿ, ನಾವು, ನಿಮಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ವ್ಯಕ್ತಿ ಮುಖ್ಯವಲ್ಲ ಪಕ್ಷ
ಮಧ್ಯಪ್ರದೇಶ, ರಾಜಾಸ್ತಾನ ಹಾಗೂ ಹರಿಯಾಣದಲ್ಲಿ ನಾವು ಸ್ವಲ್ಪ ಸಡಿಲ ಕೊಟ್ಟಿದ್ದರಿಂದ ಅಧಿಕಾರವನ್ನೇ ಕಳೆದುಕೊಳ್ಳಬೇಕಾಯಿತು, ನಮಗೆ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ.
ನಮ್ಮ ಬಲ ಹೆಚ್ಚಿರುವಾಗ ಈ ಸಚಿವರುಗಳಿಗೆ ನೀವು ಅಂಜುವುದು ಬೇಡ ಎಂದಿದ್ದಲ್ಲದೆ, ಕರ್ನಾಟಕದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ, ಏನಿದ್ದರೂ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಸಮಾವೇಶಕ್ಕೂ ಮುನ್ನ ಖರ್ಗೆ ಅವರು, ಅಪಸ್ವರ ಎತ್ತದೆ, ಕೊಟ್ಟಿರುವ ಕೆಲಸವನ್ನು ಬಾಯಿಮುಚ್ಚಿಕೊಂಡು ಮಾಡಿ ಎಂದು ಕೆಲವು ಸಚಿವರಿಗೆ ಖಡಕ್ಕಾಗಿ ತಿಳಿಸಿದ್ದರು.
ಬಹಿರಂಗ ಹೇಳಿಕೆ
ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಕುಮಾರ್ ಕೆಳಗಿಳಿಯಬೇಕು, ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಅಧಿಕಾರದಲ್ಲಿ ಮುಂದುವರೆಯಬೇಕು, ಅವರ ನಾಯಕತ್ವ ಬಿಟ್ಟು ಬೇರೆಯವರ ನಾಯಕತ್ವ ನಮಗೆ ಬೇಡ ಎಂದು ಸಚಿವರಾದ ಕೆ.ಎನ್.ರಾಜಣ್ಣ, ಸತೀಶ್ ಜಾರಕಿಹೊಳಿ ಬಹಿರಂಗವಾಗೇ ಹೇಳಿದ್ದರು.
ಇವರ ಅಪಸ್ವರಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ಧ್ವನಿಗೂಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.